ಕಾರವಾರ:ನಗರದ ಗ್ರೀನ್ ಸ್ಟ್ರೀಟ್ ರಸ್ತೆಯ ಬಳಿ ನಗರಸಭೆಯಿಂದಲೇ ನಿಯಮ ಮೀರಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿರುವುದು ಸಾಬೀತಾಗಿದ್ದು, ಕಟ್ಟಡ ತೆರವು ಮಾಡುವಂತೆ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎತ್ತಿಹಿಡಿದಿದೆ.
ನಗರದ ಗ್ರೀನ್ ಸ್ಟ್ರೀಟ್ ರಸ್ತೆಯ ಶಹರ ಪೊಲೀಸ್ ಠಾಣೆ ಎದುರು 2007ರಲ್ಲಿ ಸರ್ವೆ ನಂಬರ್ ಇಲ್ಲದ ಮತ್ತು ಕೆಡಿಎಯಿಂದ ಪರವಾನಗಿ ಪಡೆಯದೇ, ಪಾರ್ಕಿಂಗ್ ಕೂಡ ಇಲ್ಲದೆ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಕಾನೂನುಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ 2007ರಲ್ಲಿ ಜಗದೀಶ ಬಿರ್ಕೋಡಿಕರ್, ವಿವೇಕಾನಂದ ನಾಯ್ಕ, ದೀಪಕ್ ಪೆಡ್ನೇಕರ್ ದೂರು ದಾಖಲಿಸಿದ್ದರು. ದಾನವಾಗಿ ನೀಡಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದರ ಜೊತೆಗೆ ಕಾನೂನು ಉಲ್ಲಂಘಿಸಿದರ ಬಗ್ಗೆ ಈ ಮೂವರ ವಾದ ಒಪ್ಪಿದ್ದ ಕೆಳ ನ್ಯಾಯಾಲಯವೂ ನಗರಸಭೆ ವಿರುದ್ಧ ತೀರ್ಪು ನೀಡಿತ್ತು.
ದೂರುದಾರರ ಪ್ರತಿಕ್ರಿಯೆ (ETV Bharat) ಆದರೆ, ನಗರಸಭೆಯ ಅಂದಿನ ಆಯುಕ್ತರು ಈ ತೀರ್ಪಿನ ವಿರುದ್ಧ 2013ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಸೆ.19ರಂದು ತೀರ್ಪು ಪ್ರಕಟಿಸಿದ್ದು, ನಗರಸಭೆಯು ಕಾನೂನು ಉಲ್ಲಂಘಿಸಿದ ಬಗ್ಗೆ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಮಾನ್ಯ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ದೂರುದಾರರಾದ ಜಗದೀಶ ಬಿರ್ಕೋಡಿಕರ್ ಮಾತನಾಡಿ, ''ಈ ಹಿಂದೆ ರಸ್ತೆ ಮಾಡಲು ದಾನವಾಗಿ ನೀಡಿದ್ದ ಜಾಗ. ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಅರ್ಜಿ ಸಲ್ಲಿಸಲಾಗಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಸಲ್ಲಿಕೆ ಮಾಡಿದ್ದ ಈ ಅರ್ಜಿಯ ಬಗ್ಗೆ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ನಗರಸಭೆ ಮೇಲ್ಮನವಿಗೆ ಹೋಗಿತ್ತು. ಆದರೂ ಇದೀಗ ನಮ್ಮ ವಾದವನ್ನು ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿದಿದೆ. ಇದೀಗ ನಗರಸಭೆ ಈ ತೀರ್ಪಿನ ಬಗ್ಗೆ ಯಾವ ತೀರ್ಮಾನ ತೆಗೆದುಕ್ಕೊಳ್ಳುತ್ತದೆ ನೋಡಿ ನಾವು ಕೂಡ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.
''ರಸ್ತೆಗಾಗಿ ದಾನವಾಗಿ ನೀಡಿದ ಜಾಗದಲ್ಲಿ ರಸ್ತೆಯನ್ನು ಇನ್ನಷ್ಟು ಅಗಲ ಮಾಡಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ಈ ಜಾಗ ಅಗಲವಾದ ಬಳಿಕವೂ ಹೆಚ್ಚುವರಿ ಜಾಗ ಇದ್ದಲ್ಲಿ ಆ ಜಾಗದಲ್ಲಿ ಸ್ಟ್ರೀಕ್ಟ್ ಪ್ರೀ ಪಾರ್ಕಿಂಗ್ ಮಾಡಬೇಕು. ಇದು ದಾನವಾಗಿ ನೀಡಿದ ಜಾಗ ಆದ ಕಾರಣ ಹಣವನ್ನು ವಸೂಲಿ ಮಾಡಬಾರದು. ಸಾಧ್ಯವಾದಷ್ಟು ಜನರ ಉಪಯೋಗಕ್ಕೆ ಮೀಸಲು ಇಡಬೇಕು'' ಎಂದು ಜಗದೀಶ ಬಿರ್ಕೋಡಿಕರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ನ್ಯಾಯಾಲಯದ ಕಲಾಪದ ವೇಳೆ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿ - High Court Justice Regret