ಕಾರವಾರ (ಉತ್ತರ ಕನ್ನಡ): ಶಿರೂರು ಗುಡ್ಡ ಕುಸಿತದಿಂದಾಗಿ ಚತುಷ್ಪಥ ಹೆದ್ದಾರಿ ಸಂಪರ್ಕ ಕಡಿತಗೊಂಡು ಎರಡು ವಾರಗಳೇ ಕಳೆದಿವೆ. ಹೆದ್ದಾರಿ ಉದ್ದಕ್ಕೂ ಸಾಲು ಸಾಲಾಗಿ ನಿಂತುಕೊಂಡಿರುವ ಲಾರಿಗಳ ಜೊತೆಗೆ ಅಸಂಖ್ಯಾತ ಸವಾರರು ಹೆದ್ದಾರಿಯಲ್ಲಿ ಓಡಾಡುವುದಕ್ಕೋಸ್ಕರ ಎದುರು ನೋಡುತ್ತಿದ್ದಾರೆ. ಆದರೆ, ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಸಂಚಾರ ಮುಕ್ತಗೊಳಿಸುವ ಬಗ್ಗೆ ಭರವಸೆ ನೀಡಿದ್ದ ಜಿಲ್ಲಾಡಳಿತ ಇದೀಗ ಸದ್ಯದಲ್ಲಿಯೇ ಸಂಚಾರ ಮುಕ್ತಗೊಳಿಸುವ ಭರವಸೆ ನೀಡಿದೆ.
ಜು.16 ರಂದು ಭಾರಿ ಮಳೆಯಿಂದಾಗಿ ಶಿರೂರು ಗುಡ್ಡದ ಬಳಿ ಬೃಹತ್ ಗುಡ್ಡ ಕುಸಿತದಿಂದಾಗಿ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಇಂದಿಗೆ 16 ದಿನ ಕಳೆದರೂ ಕೂಡ ಸಂಚಾರಕ್ಕೆ ಮಾತ್ರ ಮುಕ್ತಗೊಂಡಿಲ್ಲ. ಹೆದ್ದಾರಿ ಮೇಲೆ ಬಿದ್ದಿರುವ ಕಲ್ಲು ಮಣ್ಣುಗಳನ್ನು ಕಳೆದ ನಾಲ್ಕು ದಿನಗಳ ಹಿಂದೆಯೇ ತೆರವು ಮಾಡಿದ್ದರೂ ಈ ಪ್ರದೇಶದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಭೀತಿಯ ಕಾರಣಕ್ಕೆ ಜಿಲ್ಲಾಡಳಿತ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಸುರಕ್ಷತತೆ ಪರಿಶೀಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಆದರೆ, ಕಳೆದ 16 ದಿನಗಳಿಂದ ಹೆದ್ದಾರಿ ಮಧ್ಯದಲ್ಲಿ ಸಿಲುಕಿಕೊಂಡು ಸಕಾಲದಲ್ಲಿ ಊಟ, ನಿದ್ರೆಯಿಲ್ಲದೇ ಸುರಿವ ಮಳೆಯಲ್ಲಿ ಕಾಲ ಕಳೆಯುತ್ತಿರುವ ಚಾಲಕರು ಹೆದ್ದಾರಿ ಸಂಚಾರದ ದಿನಗಳನ್ನೇ ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಹುಬ್ಬಳ್ಳಿ, ಸಿರ್ಸಿ, ಮಂಗಳೂರು ಮಾರ್ಗವಾಗಿ ಸಾಗಿ ಬರುವ ವಾಹನಗಳು ರಾಜ್ಯ ಹೆದ್ದಾರಿ ಹಿಲ್ಲೂರು ಹಾಗೂ ಶಿರಗುಂಜಿಯ ಮಾರ್ಗವನ್ನು ಪರ್ಯಾಯ ರಸ್ತೆಯನ್ನಾಗಿಸಿಕೊಂಡಿವೆ. ಕಿರಿದಾಗಿರುವ ರಾಜ್ಯ ಹೆದ್ದಾರಿಯಲ್ಲಿ ಅಧಿಕ ಭಾರದ ವಾಹನಗಳ ಸಂಚಾರದಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ವಾಹನಗಳು ಸಂಚರಿಸಲು ಬಾರದಂತಾಗಿದೆ.
ಸಾಮರ್ಥ್ಯ ಕಳೆದುಕೊಂಡ ರಸ್ತೆಗಳ ಹಲವೆಡೆ ಬಹು ಭಾರದ ವಾಹನಗಳು, ಟೂರಿಸ್ಟ್ ಬಸ್ಗಳು ಮಗುಚಿಕೊಳ್ಳತೊಡಗಿದ್ದು, ಕ್ರೇನ್ ಬಳಸಿ ಮೇಲಕ್ಕೆತ್ತುವ ಕಾರ್ಯ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಬಾಳೇಗುಳಿ, ಶಿರೂರು ಬಳಿ ಲಾರಿಗಳು ಒಂದರ ಹಿಂದೆ ಇನ್ನೊಂದು ಕಿ. ಮೀ ಉದ್ದದವರೆಗೆ ಸಾಲಾಗಿ ನಿಂತು ಕೊಂಡಿವೆ.