ದಾವಣಗೆರೆ:ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯದ ಬಗ್ಗೆ ಬಿಜೆಪಿ ಶಾಸಕ ಹರೀಶ್ ಗಂಭೀರ ಆರೋಪ ಮಾಡಿದ್ದರು. ಇದೀಗ ಹರೀಶ್ ವಿರುದ್ಧ ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಎಸ್.ಎ ರವೀಂದ್ರನಾಥ್, ಮಾಡಾಳ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಲೋಕಸಭೆ ಚುನಾವಣೆಯಲ್ಲಿ ನಾವು ರವೀಂದ್ರನಾಥ್ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆದರೆ ಕೆಲವರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಬಿ.ಪಿ. ಹರೀಶ್ ಕ್ಷೇತ್ರದಲ್ಲೇ ಕಾಂಗ್ರೆಸ್ಗೆ ಹೆಚ್ಚು ಮತ ಬಂದಿದೆ. ಜೊತೆಗೆ ಇವರಿಗೆ ಸಾಥ್ ನೀಡಲು ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಇದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರಿಬ್ಬರು 1 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಕೇವಲ 70 ಸಾವಿರ ಮತ ಬಂದಿದೆ. ತನ್ನ ಕ್ಷೇತ್ರದಲ್ಲೇ ಶಾಸಕ ಬಿ.ಪಿ. ಹರೀಶ್ ಬಿಜೆಪಿಗೆ ಲೀಡ್ ಕೊಟ್ಟಿಲ್ಲ. ಹರಿಹರ ಶಾಸಕ ಹರೀಶ್ ನಮ್ಮ ವಿರುದ್ಧ ಆರೋಪಿಸಿದ್ರೆ ಸುಮ್ಮನಿರಲ್ಲ. ಬಿ ಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಶಾಸಕ ಹರೀಶ್ಗೆ ಖಡಕ್ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, 4 ಬಾರಿ ಗೆದ್ದು ಒಂದು ಬಾರಿ ಸೋತಿದ್ದಕ್ಕೆ ಆತಂಕಪಡುವ ಅಗತ್ಯವಿಲ್ಲ. ಒಂದಿಷ್ಟು ದಿನ ಯಾವುದಾದ್ರು ಆಲದ ಮರದ ಕೆಳಗೆ ಶಾಂತವಾಗಿ ಕುಳಿತುಕೊಳ್ಳಿ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಸೋಲಾಗಿದೆ. ನಾನು ಕೂಡಾ ಐದು ಸಲ ಚುನಾವಣೆಯಲ್ಲಿ ಗೆದ್ದು, 5 ಸಲ ಸೋತಿದ್ದೇನೆ. ಹಾಗಂತ ಸಿಕ್ಕ ಸಿಕ್ಕವರ ಮೇಲೆ ಆರೋಪ ಮಾಡುತ್ತಾ ಸುತ್ತಾಡುತ್ತಿಲ್ಲ. ಈ ಹಿಂದೆ ಪ್ರಚಾರಕ್ಕೆ ಹೋದಾಗ ಕಲ್ಲಿನಿಂದ ಹೊಡೆಯಲು ಬರುತ್ತಿದ್ದರು. ಆದರೆ ಈಗ ಆ ವಾತಾವರಣ ಇಲ್ಲ. ಮತ್ತೆ ಕಾರ್ಯಕರ್ತರ ಬಳಿ ಹೋಗಿ ನಿಮ್ಮ ಮಕ್ಕಳನ್ನಾದ್ರು ಜನ ಗೆಲ್ಲಿಸ್ತಾರೆ. ಸ್ವಲ್ಪ ದಿನ ಶಾಂತವಾಗಿ ಇರಿ ಎಂದು ಸಲಹೆ ಕೊಟ್ಟರು.