ಬೆಂಗಳೂರು/ನವದೆಹಲಿ:''ಚೀನಾದ ಅಗ್ಗದ ಉಕ್ಕಿನ ಸವಾಲು ಸೇರಿದಂತೆ ದೇಶೀಯ ಉಕ್ಕು ಕ್ಷೇತ್ರದ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ'' ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನವದೆಹಲಿಯಲ್ಲಿ ಬುಧವಾರ ಬೆಳಗ್ಗೆ ದೇಶೀಯ ಮಿಶ್ರಲೋಹ ತಯಾರಕರ ಒಕ್ಕೂಟ (IPAFA) ಹಮ್ಮಿಕೊಂಡಿದ್ದ ದೇಶೀಯ ಮಿಶ್ರಲೋಹ ಉದ್ಯಮ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಚೀನಾದಿಂದ ಅನಿಯಂತ್ರಿತವಾಗಿ ಆಮದಾಗುತ್ತಿರುವ ಉಕ್ಕಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
''ಚೀನಾದ ಉಕ್ಕಿನ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವ ಬಗ್ಗೆ ಆದಷ್ಟು ಬೇಗ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ದೇಶೀಯ ಉಕ್ಕು ಕ್ಷೇತ್ರವನ್ನು ಅಪಾಯಕ್ಕೆ ಸಿಲುಕಲು ಬಿಡುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.
''ಉಕ್ಕಿನ ಕ್ಷೇತ್ರದ ಜೊತೆಗೆ ದೇಶೀಯ ದೇಶೀಯ ಮಿಶ್ರಲೋಹ ಉದ್ಯಮವನ್ನು ರಕ್ಷಿಸಬೇಕಾದ ಹೊಣೆ ನಮ್ಮ ಮೇಲಿದೆ. ಸವಾಲುಗಳಿಂದ ಉದ್ಯಮಕ್ಕೆ ರಕ್ಷಣೆ ಕೊಡಬೇಕಿದೆ. ಈ ನಿಟ್ಟಿನಲ್ಲಿ ಉಕ್ಕಿನ ಮೇಲೆ ಕನಿಷ್ಠ ಪ್ರಮಾಣದ ಆಮದು ಸುಂಕ ವಿಧಿಸುವ ಬಗ್ಗೆ ಹಣಕಾಸು ಸಚಿವರ ಜತೆ ಸಮಾಲೋಚನೆ ನಡೆಸಲಾಗುವುದು. ಈ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ. ವಿತ್ತ ಸಚಿವರನ್ನು ಒಪ್ಪಿಸುವ ಕೆಲಸ ಮಾಡಲಾಗುವುದು'' ಎಂದು ತಿಳಿಸಿದರು.