ಬಳ್ಳಾರಿ:ಜಿಲ್ಲೆಯ ಸಂಡೂರಿನ ದಟ್ಟ ಕಾಡಿನಲ್ಲಿ ಸಮುದ್ರಮಟ್ಟಕ್ಕಿಂತ ಅತಿ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಕುರಿತು ತಜ್ಞರ ಶೋಧನೆಯಿಂದ ಕಂಡು ಬಂದಿದೆ. ಒಂದು ಶೋಧನೆಯಲ್ಲಿ ಶಿಲಾಯುಗದ ಮಾನವನ ಕುರುಹುಗಳಾದ ಸೂಕ್ಷ್ಮ ಶಿಲಾ ಆಯುಧಗಳು ದೊರೆತಿವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಸಂಡೂರು ಪದರ ಶಿಲೆಯ ಪಟ್ಟಿಯ ದಟ್ಟ ಎಲೆಯುದುರುವ ಕಾಡಿನ 1,000 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಪ್ರಾಗೈತಿಹಾಸಿಕ ನೆಲೆಗಳನ್ನು ಹುಡುಕುವುದು ಒಂದು ದೊಡ್ಡ ಸವಾಲಾಗಿದೆ. ಸಂಡೂರು ಬೆಟ್ಟಗಳಲ್ಲಿರುವ ನವಲೂಟಿ ಗುಹೆಯಲ್ಲಿ ಒಂದು ಶೋಧನೆಯಲ್ಲಿ ಶಿಲಾಯುಗದ ಮಾನವನ ಕುರುಹುಗಳಾದ ಸೂಕ್ಷ್ಮ ಶಿಲಾ ಆಯುಧಗಳು ದೊರೆತಿವೆ. ಈ ಕುರುಹುಗಳು ಬಹುಶಃ 10 ಸಾವಿರ ವರ್ಷಗಳ ಹಿಂದೆ ಜೀವನಾಧಾರಕ್ಕೆ ಬೇಕಾದ ಸಂಪನ್ಮೂಲಗಳ ಹುಡುಕಾಟದಲ್ಲಿ ಶಿಲಾಯುಗದ ಮಾನವ ಬಂದಾಗಿನ ಕಾಲದ್ದಾಗಿರಬಹುದು ಎಂದು ಗುರುತಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು, ಪ್ರಾಗೈತಿಹಾಸ ವಸ್ತು ಸಂಗ್ರಹಾಲಯದ ಸದಸ್ಯರು ಮತ್ತು ಖ್ಯಾತ ಪ್ರಾಗೈತಿಹಾಸ ತಜ್ಞ ಡಾ.ರವಿ ಕೋರಿಶೆಟ್ಟರ್, ಡಾ.ಸಮದ್ ಕೊಟ್ಟೂರು ಅವರ ಮಾರ್ಗದರ್ಶನದಲ್ಲಿ ಕಳೆದ ಜೂನ್ ಕೊನೆಯ ವಾರದಲ್ಲಿ ಶೋಧಯಾನ ಕೈಗೊಂಡು ನವಲೂಟಿಯ ಗುಹೆಗೆ ಭೇಟಿ ನೀಡಿದ್ದರು. ಈ ತಂಡದಲ್ಲಿ ಸಂತೋಷ್ ಮಾರ್ಟಿನ್, ಅಹಿರಾಜ್.ಎಂ ಹಾಗೂ ಕೆಲವು ಪ್ರಾಗೈತಿಹಾಸದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಈ ತಂಡಕ್ಕೆ ಶಿಲಾಯುಗದಲ್ಲಿ ನವಲೂಟಿ ಗುಹೆಯಲ್ಲಿ ಮಾನವ ನೆಲೆಸಿದ್ದ ಎಂಬುದಕ್ಕೆ ಅದ್ಭುತವಾದ ಪುರಾವೆಗಳು ದೊರಕಿವೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಮಧ್ಯಶಿಲಾಯುಗಕ್ಕೆ ಕುರುಹುಗಳು ಹೋಲಿಕೆ:ಇಲ್ಲಿ ದೊರೆತ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಈಗಾಗಲೇ ತಿಳಿದಿರುವ ಭಾರತದ ಮಧ್ಯಶಿಲಾಯುಗದ ಶಿಲಾ ಉಪಕರಣಗಳನ್ನು ಹೋಲುತ್ತಿವೆ. ದೊರೆತ ಈ ಮೂಳೆಗಳು ಸಾಕು ಪ್ರಾಣಿಗಳಾದ ದನ ಹಾಗೂ ಮೇಕೆಗಳದ್ದಾಗಿವೆ ಎಂದು ತಿಳಿದು ಬಂದಿದೆ. ಆದರೆ, ಈ ನಿರ್ಧಾರ ತಾತ್ಕಾಲಿಕವಾಗಿದ್ದು, ಶಿಲಾ ಉಪಕರಣಗಳ ನಿಖರವಾದ ಕಾಲವನ್ನು ಮತ್ತು ಅವುಗಳ ಹೆಚ್ಚಿನ ವಿವರವನ್ನು ಸುದೀರ್ಘ ವೈಜ್ಞಾನಿಕ ಸಂಶೋಧನೆಯಿಂದ ತಿಳಿಯಲು ಸಾಧ್ಯವಾಗುತ್ತದೆ ಎಂದು ಪ್ರಶಾಂತ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಆದಿಮಾನವನ ನೆಲೆ:19ನೇ ಶತಮಾನದ ಉತ್ತರಾರ್ಧದಿಂದ ಭೂವಿಜ್ಞಾನಿಗಳು ಹಾಗೂ ನಿಸರ್ಗ ಪ್ರೇಮಿಗಳು ಸಂಡೂರಿನ ಕಾಡುಗಳಲ್ಲಿ ಅನೇಕ ವಿಸ್ಮಯಗಳ ಶೋಧನೆಯಲ್ಲಿ ತೊಡಗಿದ್ದಾರೆ. ಅವರ ಶೋಧನಾ ಯಾನವು ಈ ಪ್ರದೇಶದ ಜೀವ ವೈವಿಧ್ಯತೆ ಹಾಗೂ ಭೂವೈಜ್ಞಾನಿಕ ಇತಿಹಾಸ ಹಾಗೂ ಆರ್ಥಿಕ ಸಂಭಾವ್ಯಗಳನ್ನು ಅನಾವರಣ ಮಾಡುವುದರಲ್ಲಿ ಕೇಂದ್ರೀಕರಿಸಿತ್ತು. ಸಂಶೋಧನೆಗಳಿಂದಾಗಿ ಇಡೀ ದಕ್ಷಿಣ ಭಾರತದಲ್ಲೇ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ದೊರೆತ ಆದಿಮಾನವನ ನೆಲೆ ಇದು ಎಂದು ತಿಳಿದುಬಂದಿದೆ. ಇಂತಹ ಗುಹೆಗಳು ಶ್ರೀಲಂಕಾದಲ್ಲಿ (ಸಮುದ್ರ ಮಟ್ಟಕ್ಕಿಂತ 450 ಮೀಟರ್ ಎತ್ತರ)ದಲ್ಲಿ ಕಂಡು ಬಂದಿದ್ದು, ಅವು 50,000 ವರ್ಷಗಳಷ್ಟು ಹಿಂದೆಯೇ ಆದಿಮಾನವನ ನೆಲೆಯಾಗಿದ್ದು, ಮಳೆಗಾಡುಗಳ ಪರಿಸರದಲ್ಲಿ ಮಾನವ ತನ್ನ ನೆಲೆಯನ್ನು ಸ್ಥಾಪಿಸಿದ ಜಾಣ್ಮೆಯನ್ನು ಸೂಚಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉತ್ತರ ಭಾರತದ ತೇವಭರಿತ ಕಾಡುಗಳ ಗುಹೆಗಳು ನವಶಿಲಾಯುಗದ ಕಾಲದಾಗಿದ್ದು, ನವಲೂಟಿ ಗುಹೆಗಳಿಗಿಂತ ಅವು ಅಷ್ಟೇನೂ ಎತ್ತರದವಲ್ಲದ (ಸಮುದ್ರ ಮಟ್ಟಕ್ಕಿಂತ 300 ಮೀಟರ್ ಎತ್ತರ) ಗುಹೆಗಳಾಗಿವೆ. ಆದಾಗ್ಯೂ, ದಕ್ಷಿಣ ಭಾರತದ ಈ ಗುಹೆ ಅತ್ಯಂತ ವಿಶಿಷ್ಟ ನೆಲೆಯಾಗಿದ್ದು, ಬಹುಶಾಸ್ತ್ರೀಯ ಸಂಶೋಧನೆ ಹಾಗೂ ರೇಡಿಯೋಮೆಟ್ರಿಕ್ ವಿಧಾನದಿಂದ ಕಾಲವನ್ನು ಪತ್ತೆ ಮಾಡುವಂತಹ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ. ಈ ಸಂಶೋಧನೆ ಜಗತ್ತಿನ ಮುಂದಿನ ತಲೆಮಾರಿನ ಪ್ರಾಗೈತಿಹಾಸ ತಜ್ಞರನ್ನು ಇತ್ತ ಕಡೆ ಸೆಳೆಯಲಿದೆ. ಈ ಗುಹೆಯಿಂದ ಇಡೀ ವಿಶ್ವದ ಗಮನ ಬಳ್ಳಾರಿ ಜಿಲ್ಲೆಯ ಮೇಲೆ ಬೀಳಲಿದೆ ಎಂದು ಹೇಳಿದ್ದಾರೆ.
ಕಳೆದ 25 ವರ್ಷಗಳ ಹಿಂದೆಯೇ ನವಲೂಟಿ ಗುಹೆಯಲ್ಲಿ ಆದಿಮಾನವನ ನೆಲೆಯ ಬಗ್ಗೆ ಅಂದಾಜು ಮಾಡಿದ್ದ ಡಾ.ಸಮದ್ ಕೊಟ್ಟೂರು ಪ್ರಾಗೈತಿಹಾಸ ತಜ್ಞರನ್ನು ಈ ಗುಹೆಗೆ ಕರೆದುಕೊಂಡು ಹೋಗುವ ಮೂಲಕ ಅದನ್ನು ದೃಢಪಡಿಸಿದ್ದಾರೆ. ಪ್ರಾಗೈತಿಹಾಸಜ್ಞ ಡಾ.ರವಿ ಕೋರಿಶೆಟ್ಟರ್ ಇವರ ನೇತೃತ್ವದಲ್ಲಿ ನವಲೂಟಿ ಗುಹೆಯ ಹೆಚ್ಚಿನ ಸಂಶೋಧನೆ ಮಾಡಲು ಸೂಕ್ತ ಸಹಯೋಗವನ್ನು ನೀಡಲು ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಪ್ರದಾನ ನಡೆಯುವ ದರ್ಬಾರ್ ಹಾಲ್ ಇನ್ನು 'ಗಣತಂತ್ರ ಮಂಟಪ'; ಅಶೋಕ್ ಹಾಲ್ ಹೆಸರೂ ಬದಲು - Rashtrapati Bhavan halls Rename