ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದು ಪ್ರಲ್ಹಾದ್ ಜೋಶಿಯಿಂದ : ದಿಂಗಾಲೇಶ್ವರ ಶ್ರೀ ಹುಬ್ಬಳ್ಳಿ:ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತೊಂದರೆಗೆ ಒಳಗಾಗಿ, ಅಧಿಕಾರ ಬಿಡುವಂತಾಯಿತು. ಈಗ ಅವರೇ ಜೋಶಿಗೆ ಬೆಂಬಲವಾಗಿ ನಿಂತು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದನ್ನು ಕಂಡರೆ ತಮಗೆ ಬಿಎಸ್ವೈ ಮೇಲೆ ಕನಿಕರ ಉಂಟಾಗುತ್ತದೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಇಂದು ಹುಬ್ಬಳ್ಳಿಯ ಶಾಂತಿನಗರದಲ್ಲಿನ ಸೂಫಿಸಂತರ ಸಂಘದ ರಾಜ್ಯಾಧ್ಯಕ್ಷರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ದುಸ್ಸಾಹಸವನ್ನು ಮಾಡಬಾರದು ಎಂದು ಹೇಳಿಕೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಶ್ರೀಗಳು, ಅನ್ಯಾಯ ಮತ್ತು ದೌರ್ಜನ್ಯ ನಡೆಸಿದವರ ಪರವಾಗಿ ಮಾಜಿ ಸಿಎಂ ನಿಂತಿರುವುದನ್ನು ಕಂಡರೆ ನನಗೆ ಪಾಪ ಎನಿಸುತ್ತಿದೆ. ಅವರನ್ನು ಒತ್ತಾಯಪೂರ್ವಕವಾಗಿ ನಾಮಪತ್ರ ಸಲ್ಲಿಕೆಗೆ ಕರೆಸಲಾಗಿತ್ತು ಎಂದು ಆರೋಪಿಸಿದರು.
ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಿಂದಲೇ ಅವರು (ಬಿಎಸ್ವೈ) ಅಧಿಕಾರ, ರಾಜಕೀಯ ಸ್ಥಾನಮಾನ ಕಳೆದುಕೊಂಡರು. ಈಗ ಮತ್ತೆ ಅವರ ಬೆನ್ನಿಗೇ ನಿಂತಿದ್ದು ಯಾವ ಪುರುಷಾರ್ಥಕ್ಕೆ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿಗೆ ಸೋಲಿನ ಹತಾಶೆ, ಭೀತಿ ಉಂಟಾಗಿದೆ. ಹೀಗಾಗಿ ರಾಜ್ಯಸಭೆ ಸದಸ್ಯರು, ಮಾಜಿ ಸಿಎಂಗಳು, ಶಾಸಕರನ್ನು ಕರೆದುಕೊಂಡು ಬಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ತಮಗೆ ಬೆಂಬಲ ನೀಡುವಂತಹ ಅನಿವಾರ್ಯತೆಯನ್ನು ಬಿಜೆಪಿ ಅಭ್ಯರ್ಥಿ ನಾಯಕರಲ್ಲಿ ಸೃಷ್ಟಿಸಿದ್ದಾರೆಂಬ ಅನುಮಾನ ಮೂಡುತ್ತಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಬಿಎಸ್ವೈ ಜೊತೆ ಚರ್ಚಿಸಿದ್ದೇನೆ:ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಜೊತೆಗೆ ಮಾತನಾಡಿದ್ದಾರೆ. ಆದರೆ, ಅದು ಅವರ ಪಕ್ಷದ ಕರ್ತವ್ಯದ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ನಾವು ಚುನಾವಣೆಗೆ ಸ್ಪರ್ಧಿಸುವ ನಿಲುವು ದೃಢವಾಗಿದೆ. ಈ ಚುನಾವಣೆಯಲ್ಲಿ ನಾವು ದುಸ್ಸಾಹಸ ಮಾಡುತ್ತಿಲ್ಲ, ಸಾಹಸ ಮಾಡುತ್ತಿದ್ದೇವೆ. ಇದು ಧರ್ಮ ಯುದ್ಧ, ಸ್ವಾಭಿಮಾನದ ಚುನಾವಣೆ ಆಗಿದೆ. ಕಣದಿಂದ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಏ.18 ಕ್ಕೆ ನಾಮಪತ್ರ ಸಲ್ಲಿಕೆ:ಏಪ್ರಿಲ್ 18 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ರಾಜಕೀಯ ಪಕ್ಷಗಳಂತೆ ನಾವು ಶಕ್ತಿ ಪ್ರದರ್ಶನದ ಹುಚ್ಚು ಸಾಹಸ ಮಾಡುವುದಿಲ್ಲ. ನಗರದ ಟೌನ್ಹಾಲ್ನಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಯಾತ್ರೆಯ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ ಎಂದರು. ರಾಜಕೀಯ ಪಕ್ಷಗಳ ನಾಯಕರು, ಮಠಾಧೀಶರನ್ನು ನಾಮಪತ್ರ ಸಲ್ಲಿಕೆಗೆ ಆಹ್ವಾನಿಸಿಲ್ಲ. ಬಡವರು, ಕೂಲಿಕಾರರು ತಮ್ಮ ಕೆಲಸಗಳನ್ನು ಬಿಟ್ಟು ಬರಬಾರದು ಎಂದು ಇದೇ ವೇಳೆ ಶ್ರೀಗಳು ಮನವಿ ಮಾಡಿದರು.
ನಾಮಪತ್ರ ಸಲ್ಲಿಸುವ ವೇಳೆ ನಿರೀಕ್ಷೆಗೂ ಮೀರಿ ಜನರು ಬರುವ ವಿಶ್ವಾಸವಿದೆ. ಮುಸ್ಲಿಂ ಸಮುದಾಯ, ರೈತ ಸಂಘ, ಮಹಿಳಾ ಪ್ರತಿನಿಧಿಯೊಬ್ಬರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರುತ್ತಾರೆ. ನಾಮಪತ್ರ ಸಲ್ಲಿಕೆಗೆ ಮುಹೂರ್ತ ನೋಡುವುದಿಲ್ಲ. ಸರ್ಕಾರದ ಸಮಯವೇ ನಮಗೆ ಮೂಹೂರ್ತ ಎಂದು ದಿಂಗಾಲೇಶ್ವರ ಶ್ರೀ ತಿಳಿಸಿದರು.
ಇದನ್ನೂ ಓದಿ:ಧಾರವಾಡ ಕ್ಷೇತ್ರದಲ್ಲಿ ಜನ ಜೋಶಿ ಪರವಾಗಿದ್ದಾರೆ, ದಿಂಗಾಲೇಶ್ವರ ಶ್ರೀ ದುಸ್ಸಾಹಸಕ್ಕೆ ಮುಂದಾಗಬಾರದು: ಬಿ ಎಸ್ ಯಡಿಯೂರಪ್ಪ - Former CM B S Yediyurappa