ದಾವಣಗೆರೆ: ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಚಿಕಿತ್ಸಾ ವೆಚ್ಚವನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಪ್ರಾಥಮಿಕ ಕೇಂದ್ರಗಳಲ್ಲಿನ ಚಿಕಿತ್ಸಾ ವೆಚ್ಚದ ಹಣ ಸರ್ಕಾರಕ್ಕೆ ಬರುವುದಿಲ್ಲ. ಅದು ಆರೋಗ್ಯ ರಕ್ಷಾ ಸಮಿತಿ(Arogya Raksha Simitis - ARS)ಗೆ ಹೋಗುತ್ತದೆ. ಬಹಳ ವರ್ಷಗಳ ಬಳಕ ಚಿಕಿತ್ಸಾ ವೆಚ್ಚ ಪರಿಷ್ಕರಿಸಲು ನಿರ್ಧರಿಸಲಾಗಿದೆ. 10ರೂ. ಇದ್ದದ್ದನ್ನು 20ರೂ.ಗೆ ಹಾಗೂ 20ರೂ. ಇದ್ದದ್ದನ್ನು 30ರೂ.ಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಕೆಲವೆಡೆ 30ರೂ. ಇದ್ದದ್ದನ್ನು 40ರೂ.ಗೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಈ ಚಿಕಿತ್ಸಾ ವೆಚ್ಚ ಹೆಚ್ಚಳದ ಹಣ ಆಸ್ಪತ್ರೆಗೆ ಹೋಗುತ್ತದೆ ವಿನಃ ಆ ಹಣ ಸರ್ಕಾರಕ್ಕೆ ಬರುವುದಿಲ್ಲ. ಹೆಚ್ಚಳ ಏನು ದೊಡ್ಡ ವಿಚಾರ ಅಲ್ಲ. ಆದರೆ ಈ ಬಿಜೆಪಿಯವರು ಅದನ್ನೇ ದೊಡ್ಡದಾಗಿ ಮಾಡುತ್ತಿದ್ದಾರೆ. ಇದು ARS ಕಮೀಟಿಯ ತೀರ್ಮಾನ. ಆಸ್ಪತ್ರೆ ಆದಾಯ ಹೆಚ್ಚು ಮಾಡಿಕೊಳ್ಳಲು ಈ ನಿರ್ಧಾರ ಮಾಡಿದ್ದಾರೆ. ಆದರೆ, ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ಗ್ಯಾರಂಟಿಗೆ ಹಣ ಕ್ರೋಢೀಕರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿಗಳಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿಯವರು ಮೊದಲು ರೈತರಿಗೆ ಬರಬೇಕಾದ ನಬಾರ್ಡ್ ದುಡ್ಡು ಕೊಡಿಸಲಿ' ಎಂದು ಸವಾಲು ಹಾಕಿದರು.