ಹುಬ್ಬಳ್ಳಿ (ಧಾರವಾಡ): ''ವಿದ್ಯಾರ್ಥಿಗಳು ಮಾದಕ ವಸ್ತುವಿನ ನಶೆಗೆ ಬೀಳಬೇಡಿ. ನಾನು ಪ್ರತೀ ಅಭಿಮಾನಿಯನ್ನು ಸ್ನೇಹಿತನಾಗಿ ಕಾಣುತ್ತೇನೆ. ಡ್ರಗ್ಸ್ನಿಂದ ನಾವು ದೂರವಿರಬೇಕು. 'ಶಬ್ಧವೇದಿ'ಯಲ್ಲಿ ಅಪ್ಪಾಜಿ ಅದ್ಬುತವಾಗಿ ಹೇಳಿದ್ದಾರೆ. ಹುಟ್ಟು ಅನ್ನೋದು ಒಂದು ಗಿಫ್ಟ್, ಅದನ್ನು ಕಾಪಾಡಿಕೊಳ್ಳಬೇಕು. ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ ಹುಡುಕಿ, ಬೇರೆ ಎಲ್ಲದರಲ್ಲೂ ನಶೆ ಇದೆ'' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಿಳಿಸಿದರು. ಖ್ಯಾತ ನಟ ಹಲವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ಜೊತೆಗೆ ತಮ್ಮ ಭೈರತಿ ರಣಗಲ್ ಚಿತ್ರವನ್ನು ಪ್ರಚಾರ ಮಾಡಿದ್ರು.
ನಗರದ ಬಿವಿಬಿ ಕಾಲೇಜಿನಲ್ಲಿ ಮಾತನಾಡಿದ ಅವರು, ''ಮಾದಕ ವಸ್ತುಗಳಿಗೆ ದಾಸರಾದರೆ ಬದುಕು ಹಾಳಾಗುತ್ತದೆ. ಮಾದಕ ವಸ್ತು ಸರಬರಾಜು ಮಾಡುವವರನ್ನು ಪೊಲೀಸರಿಗೆ ಹಿಡಿದುಕೊಡಿ'' ಎಂದು ತಿಳಿಸಿದರು.
ಕೆಎಲ್ಇ ಕಾಲೇಜಿಗೆ ಬಂದಿದ್ದು ಖುಷಿ ಆಗ್ತಿದೆ. ನನಗೆ 62 ವರ್ಷ. ಇಲ್ಲಿಗೆ ಬಂದು ಉಲ್ಟಾ ಆಗಿದೆ. 26 ವರ್ಷ ಅನಿಸುತ್ತಿದೆ. ಭೈರತಿ ರಣಗಲ್ನಲ್ಲಿ ಒಳ್ಳೆತನಕ್ಕಾಗಿ ನಾಯಕ ಹೋರಾಡುತ್ತಾನೆ ಎಂದರು. ಇನ್ನು ಜಾಗೃತಿ ಅಭಿಯಾನದಲ್ಲಿ ಶಿವಣ್ಣ ಸಖತ್ ಸ್ಟೆಪ್ಸ್ ಹಾಕಿದ್ರು. ಟಗರು ಚಿತ್ರದ ಟಗರು ಬಂತು ಟಗರು ಹಾಡಿಗೆ ಕುಣಿದು ಕುಪ್ಪಳಿಸಿದರು. ಮುತ್ತಣ ಪೀಪಿ ಊದುವ ಹಾಡು ಹಾಡಿ ರಂಜಿಸಿದರು.
ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಶಿವಣ್ಣ: ಇದಕ್ಕೂ ಮುನ್ನ ಶಿವರಾಜ್ಕುಮಾರ್ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದಾಗಲೆಲ್ಲಾ ಸಿದ್ದಾರೂಢ ಮಠಕ್ಕೆ ಭೇಟಿ ಕೊಡೋದು ಸಂಪ್ರದಾಯ. ತಂದೆಯವರ ಕಾಲದಿಂದಲೂ ಬೆಳೆದು ಬಂದಿರುವ ಪದ್ಧತಿ. ನಮ್ಮ ಅವ್ವ ಬೆಳೆದಿದ್ದು ಸಿದ್ಧಾರೂಢ ಮಠದಲ್ಲಿ. ಅದನ್ನು ನಾವು ಯಾವತ್ತೂ ಮರೆಯೋಕೆ ಆಗಲ್ಲ. ಹೀಗಾಗಿ ಬಂದಾಗಲೆಲ್ಲಾ ಸಿದ್ಧಾರೂಢ ಮಠಕ್ಕೆ ಹೋಗುತ್ತೇನೆ ಎಂದರು.
ವಿದ್ಯಾರ್ಥಿಗಳಲ್ಲಿ ಜಾಗೃತಿಯ ಅವಶ್ಯಕತೆ ಇದೆ;ಇನ್ನೂ ಮಾದಕ ವಸ್ತು ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿಯ ಅವಶ್ಯವಿದೆ. ಬದುಕು ಅಷ್ಟು ಸುಲಭವಾಗಿ ಸಿಗಲ್ಲ. ಅದೊಂದು ದೇವರ ಕೊಡುಗೆ. ಹಾಗಾಗಿ ನಾವದನ್ನು ಅಮೂಲ್ಯವಾಗಿ ಕಾಪಾಡಿಕೊಳ್ಳಬೇಕು. ಯಾವುದೋ ಒಂದು ವಸ್ತು ಸಿಗುತ್ತೆ ಅಂತಾ ಅದಕ್ಕೆ ದಾಸರಾಗಬಾರದು. ಆ ವಸ್ತುವಿಗೆ ಶರಣಾಗೋ ಬದಲು ಅದನ್ನು ತಳ್ಳುವುದೇ ಒಳ್ಳೆಯದು. ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪ ಹುಷಾರಾಗಿರಬೇಕು. ಇದನ್ನು ದಾಟಿದರೆ ಅವರು ಇತರರಿಗೆ ಮಾದರಿಯಾಗುತ್ತಾರೆ. ಯುವ ಸಮೂಹ ಮಾದಕ ವಸ್ತುವಿಗೆ ಬಲಿಯಾಗುವುದನ್ನು ತಡೆಯಬೇಕು. ಅದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.