ಬೆಳಗಾವಿ:ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಉತ್ತರಕರ್ನಾಟಕದ ಶಕ್ತಿಪೀಠ ಸವದತ್ತಿ ಯಲ್ಲಮ್ಮದೇವಿಗೂ ಶಕ್ತಿ ಬಂದಿದೆ. ಈ ಬಾರಿ ನಡೆದ ನವರಾತ್ರಿ ಉತ್ಸವದಲ್ಲಿ ದಾಖಲೆ ಪ್ರಮಾಣದಲ್ಲಿ 16,200 ಕೆ.ಜಿ ದೀಪದ ಎಣ್ಣೆ ಸಂಗ್ರಹವಾಗಿ, ಲಕ್ಷಾಂತರ ರೂ. ಆದಾಯ ಬಂದಿದೆ. ಇನ್ನು ಸಾರಿಗೆ ಸಂಸ್ಥೆಗೂ ಬರೋಬ್ಬರಿ 66 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಈ ಬಗ್ಗೆ ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಪಿ.ಬಿ. ಮಹೇಶ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. "ನವರಾತ್ರಿಯಲ್ಲಿ ಎಣ್ಣೆ ಹೊಂಡದಲ್ಲಿ ಸ್ನಾನ ಮಾಡುವ ಭಕ್ತರು ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಎದುರು ಪ್ರತಿಷ್ಠಾಪಿಸಿದ ಅಖಂಡ ಜ್ಯೋತಿಗೆ ಎಣ್ಣೆ ಸಮರ್ಪಿಸುವುದು ಸಂಪ್ರದಾಯ. ಗುಡ್ಡಕ್ಕೆ ಬರುವ ಪ್ರತಿ ಭಕ್ತರು ಅದಕ್ಕೆ ಎಣ್ಣೆ ಹಾಕಿ, ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಣ್ಣೆ ದರ ಹೆಚ್ಚಿದ್ದರಿಂದ ಎಣ್ಣೆ ಸಂಗ್ರಹ ಪ್ರಮಾಣ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, 2 ಸಾವಿರ ಕೆಜಿ ಹೆಚ್ಚು ಎಣ್ಣೆ ಸಂಗ್ರಹವಾಗಿದೆ".
ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಯಿಂದ ಮಾಹಿತಿ. (ETV Bharat) "ಕಳೆದ ವರ್ಷ ನವರಾತ್ರಿಯಲ್ಲಿ 14,194 ಕೆಜಿ ಎಣ್ಣೆ ಸಂಗ್ರಹವಾಗಿತ್ತು. ಪ್ರತಿ ಕೆಜಿಗೆ 51 ರೂ. ದರದಲ್ಲಿ ಮಾರಾಟ ಮಾಡಿದಾಗ 7,23,894 ರೂ. ಆದಾಯ ದೇವಸ್ಥಾನಕ್ಕೆ ಬಂದಿತ್ತು. ಈ ಬಾರಿ ಅ. 3ರಿಂದ ಅ.13ರ ವರೆಗೆ 16,200 ಕೆ.ಜಿ. ಎಣ್ಣೆ ಸಂಗ್ರಹಗೊಂಡಿದೆ. ಇದನ್ನು ಟೆಂಡರ್ ಪಡೆದಿರುವವರಿಗೆ ಪ್ರತಿ ಕೆಜಿಗೆ 58 ರೂ. ದರದಲ್ಲಿ ಮಾರಾಟ ಮಾಡಿದರೆ 9,39,600 ಆದಾಯ ಬರಲಿದೆ. ಈ ನವರಾತ್ರಿ ಸಂದರ್ಭದಲ್ಲಿ ಒಟ್ಟು 21 ಲಕ್ಷ ಭಕ್ತರು ದೇವಿ ದರ್ಶನ ಪಡೆದಿರುವುದು ಮತ್ತೊಂದು ದಾಖಲೆ" ಎಂದರು.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅಖಂಡ ಜ್ಯೋತಿಗೆ ಎಣ್ಣೆ ಸಮರ್ಪಿಸುವುದು ತುಂಬಾ ವಿಶೇಷ. ಇದು ರಾಜ್ಯದ ಯಾವುದೇ ದೇವಸ್ಥಾನದಲ್ಲಿ ಕಂಡು ಬರುವುದಿಲ್ಲ.
ಇನ್ನು "ಎಣ್ಣೆ ದರ ಏರಿಕೆಯಾಗಿದ್ದರೂ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ದೀಪಕ್ಕೆ ಎಣ್ಣೆ ಹಾಕಿದ್ದಾರೆ. ಅದನ್ನು ಮೋಟಾರ್ ಮೂಲಕ ಟ್ಯಾಂಕರ್ಗೆ ಸಾಗಿಸುತ್ತಿದ್ದೇವೆ. ಗುಡ್ಡಕ್ಕೆ ರೈತಾಪಿ ವರ್ಗದವರೇ ಹೆಚ್ಚಾಗಿ ಆಗಮಿಸುತ್ತಾರೆ. ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಿದ್ದರಿಂದ ದೀಪದ ಎಣ್ಣೆ ಸಂಗ್ರಹವೂ ಹೆಚ್ಚಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಈ ಬಾರಿ ಅತೀ ಹೆಚ್ಚು ಮಹಿಳಾ ಭಕ್ತರು ಯಲ್ಲಮ್ಮದೇವಿ ದರ್ಶನ ಪಡೆದಿದ್ದಾರೆ. ಒಟ್ಟು ಭಕ್ತರ ಪೈಕಿ ಶೇ.70ರಷ್ಟು ಮಹಿಳೆಯರೇ ಇರೋದು ವಿಶೇಷ" ಎಂದು ಮಹೇಶ ಅವರು ತಿಳಿಸಿದ್ದಾರೆ.
ಅರ್ಚಕ ರಾಜು ಪಾಟೀಲ ಮಾತನಾಡಿ, "ನವರಾತ್ರಿ ಸಂದರ್ಭದಲ್ಲಿ ದೀಪಕ್ಕೆ ಎಣ್ಣೆ ಹಾಕುವುದು ವಾಡಿಕೆ. ಈ ಬಾರಿ ಎಣ್ಣೆ ದರ ಗಗನಕ್ಕೇರಿದೆ. ಆದರೂ, ಅದನ್ನು ಲೆಕ್ಕಿಸದೇ ಭಕ್ತರು ದಾಖಲೆ ಪ್ರಮಾಣದಲ್ಲಿ ಎಣ್ಣೆ ಸಮರ್ಪಿಸಿ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಯಲ್ಲಮ್ಮ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ನಾವು ಕೂಡ ಪ್ರಾರ್ಥಿಸಿದ್ದೇವೆ" ಎಂದು ಹೇಳಿದರು.
"ನವರಾತ್ರಿಯಲ್ಲಿ ಗುಡ್ಡಕ್ಕೆ ಬಂದು ದೀಪಕ್ಕೆ ಎಣ್ಣೆ ಹಾಕಿದರೆ, ನಮ್ಮ ಬಾಳು ದೀಪದಂತೆ ಬೆಳಗುತ್ತದೆ ಎಂಬ ನಂಬಿಕೆ ಇದೆ. ನಮಗೆ ದೇವಿ ಒಳ್ಳೆಯದು ಮಾಡಿದ್ದಾಳೆ. ನಮ್ಮ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸಿದ್ದಾಳೆ. ಹಾಗಾಗಿ, ಪ್ರತಿವರ್ಷ ತಪ್ಪದೇ ಇಲ್ಲಿಗೆ ಬಂದು ಎಣ್ಣೆ ಹಾಕುತ್ತೇವೆ" ಎಂಬುದು ಭಕ್ತ ಗದಗ ಜಿಲ್ಲೆಯ ಸಂಜು ಶಿಂಧಿಗೇರಿ ಅವರ ಅಭಿಪ್ರಾಯ.
65 ಲಕ್ಷ ಆದಾಯ: "ಕೆಎಸ್ಆರ್ಟಿಎಸ್ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ಅ.2ರಿಂದ 12ರವರಗೆ ವಿಶೇಷ ಬಸ್ಗಳನ್ನು ಬೆಳಗಾವಿಯಿಂದ ಯಲ್ಲಮ್ಮ ಗುಡ್ಡಕ್ಕೆ ಬಿಡಲಾಗಿತ್ತು. 919 ಸರತಿ ಬಸ್ ಕಾರ್ಯಾಚರಣೆ ಮಾಡಿದ್ದು, 55 ಸಾವಿರ ಭಕ್ತರು ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಅತೀ ಹೆಚ್ಚು ಮಹಿಳಾ ಭಕ್ತರು ಇದರ ಸದುಪಯೋಗ ಪಡೆದಿದ್ದಾರೆ. 11 ದಿನಗಳ ಅವಧಿಯಲ್ಲಿ ಒಟ್ಟು 90,535 ಕಿ.ಮೀ. ಬಸ್ ಗಳು ಕಾರ್ಯಾಚರಣೆ ಮಾಡಿ, ಸಂಸ್ಥೆಗೆ 65,44,656 ರೂ. ಆದಾಯ ತಂದು ಕೊಟ್ಟಿವೆ" ಎಂದು ತಿಳಿಸಿದರು.
ಇದನ್ನೂ ಓದಿ:'ಕೊರಗಜ್ಜನ ಕಟ್ಟೆ ನೆಮ್ಮದಿ ಕೊಡುತ್ತದೆ': ಕುತ್ತಾರಿಗೆ ನಟ ಶಿವರಾಜ್ಕುಮಾರ್ ದಂಪತಿ ಭೇಟಿ