ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರ ವಿರುದ್ಧ ರೌಡಿಶೀಟ್ ತೆರೆಯುವ ಕುರಿತು ಚರ್ಚೆ ಆರಂಭವಾಗಿದೆ. ಈಗಾಗಲೇ ಕಾನೂನು ತಜ್ಞರೊಂದಿಗೆ ಚರ್ಚಿಸಿರುವ ಪೊಲೀಸರು ರೌಡಿಶೀಟ್ ತೆರೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸಾಮಾನ್ಯವಾಗಿ ಆರೋಪಿಯೊಬ್ಬ ಹತ್ಯೆ, ದರೋಡೆ, ದರೋಡೆ ಯತ್ನ, ಗಲಭೆ ಮತ್ತಿತರ ಆರೋಪಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದರೆ ಆತನ ವಿರುದ್ಧ ರೌಡಿಶೀಟ್ ತೆರೆಯಬಹುದು. ಹತ್ಯೆಯಂತಹ ಘೋರ ಅಪರಾಧ ಪ್ರಕರಣಗಳಲ್ಲಿ ನೇರವಾಗಿ ಒಂದೇ ಬಾರಿ ರೌಡಿಶೀಟ್ ತೆರೆಯುವ ಅವಕಾಶವಿರುತ್ತದೆ.
2011ರಲ್ಲಿ ಪತ್ನಿಯ ಮೇಲಿನ ಹಲ್ಲೆ ಪ್ರಕರಣದ ಬಳಿಕ ದರ್ಶನ್ ವಿರುದ್ದ ಯಾವುದೇ ಗಂಭೀರ ಅಪರಾಧ ಪ್ರಕರಣ ದಾಖಲಾಗಿಲ್ಲ. ಆ ಪ್ರಕರಣವೂ ಸಹ ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿರುವುದರಿಂದ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಸ್ತುತ ದರ್ಶನ್ ವಿರುದ್ಧ ರೌಡಿಶೀಟ್ ತೆರೆಯುವುದಾದರೆ ಯಾವ ಅಂಶಗಳನ್ನ ಪರಿಗಣಿಸಬೇಕು ಎಂಬ ವಿಷಯಗಳ ಕುರಿತು ಕಾನೂನು ತಜ್ಞರೊಂದಿಗೆ ಪೊಲೀಸರು ಚರ್ಚಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಗೃಹ ಸಚಿವರು ಹೇಳಿದ್ದೇನು?:ಇದೇ ವಿಚಾರವಾಗಿ ಎರಡು ದಿನಗಳ ಹಿಂದೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ''ದರ್ಶನ್ ಅವರದ್ದು ಇದು ಮೊದಲ ಪ್ರಕರಣ ಅಲ್ಲ. ಈ ಹಿಂದೆಯೂ ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ತನಿಖೆ ಬಳಿಕ ಏನು ಶಿಫಾರಸು ಮಾಡುತ್ತಾರೆಂಬುದನ್ನು ನೋಡಬೇಕು. ಪೊಲೀಸರು ಸಮರ್ಥರು, ಅವರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ನಮ್ಮನ್ನು ಕೇಳಿ ಸೆಕ್ಷನ್ ಹಾಕುವುದಿಲ್ಲ. ಈ ಕುರಿತು ಪೊಲೀಸರು ಪರಿಶೀಲಿಸಲಿದ್ದಾರೆ'' ಎಂದು ಹೇಳಿದ್ದರು.
ರೌಡಿಶೀಟ್ ತೆರೆಯಲು ಮಾನದಂಡಗಳೇನು?:ಸಾಮಾನ್ಯ ಅಪರಾಧ ಪ್ರಕರಣಗಳಲ್ಲಿ ರೌಡಿಶೀಟ್ ತೆರೆಯಲು ಸಾಧ್ಯವಾಗುವುದಿಲ್ಲ. ಆರೋಪಿಯೊಬ್ಬ ಹತ್ಯೆ, ದರೋಡೆ, ದರೋಡೆ ಯತ್ನ, ಹಲ್ಲೆ, ಗಲಭೆ, ಅತ್ಯಾಚಾರದಂತಹ ಕೃತ್ಯಗಳಲ್ಲಿ ನಿರಂತರವಾಗಿ ಭಾಗಿಯಾಗುವ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುತ್ತಿದ್ದರೆ ಅಥವಾ ಆತನ ಕೃತ್ಯಗಳಿಗೆ ಪೂರಕ ಸಾಕ್ಷಿಗಳಿದ್ದರೆ ಅಂತಹ ಆರೋಪಿಯು ಸಮಾಜಕ್ಕೆ ಮಾರಕ ಎಂದು ಗುರುತಿಸಿ ಆತನ ವಿರುದ್ಧ ರೌಡಿಶೀಟ್ ತೆರೆಯಬಹುದು. ರೌಡಿಶೀಟ್ ತೆರೆಯಲ್ಪಟ್ಟ ಆರೋಪಿಯು ಪೊಲೀಸರ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು. ಆದ್ದರಿಂದ ರೌಡಿಶೀಟ್ ತೆರೆಯುವ ವಿಚಾರದಲ್ಲಿ ಪೊಲೀಸರ ವಿವೇಚನೆಯೂ ಪ್ರಮುಖವಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.