ಬೆಳಗಾವಿ: ಹೊಸ ವಾಹನ ಖರೀದಿದಾರರಿಗೆ ಹೆಚ್ಚುವರಿಯಾಗಿ ಉಪಕರ (ತೆರಿಗೆ) ಕಟ್ಟುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕ ಪರಿಷತ್ನಲ್ಲಿ ಅಂಗೀಕಾರಗೊಂಡಿತು.
ವಿಧಾನಪರಿಷತ್ನಲ್ಲಿ ಬುಧವಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಚರ್ಚೆ ವೇಳೆ, ''ದ್ವಿಚಕ್ರ ವಾಹನಕ್ಕೆ 500 ರೂ., ನಾಲ್ಕು ಚಕ್ರಗಳ ವಾಹನಕ್ಕೆ 1 ಸಾವಿರ ರೂ. ಉಪಕರ ವಿಧಿಸುವುದು ಸರಿಯಲ್ಲ. ಇದರಿಂದ ವಾಹನ ಖರೀದಿದಾರರಿಗೆ ಹೊರೆಯಾಗುತ್ತದೆ. ಇದನ್ನು ವಾಪಸ್ ಪಡೆಯಬೇಕು'' ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್, ''ದ್ವಿಚಕ್ರ ವಾಹನಕ್ಕೆ 500 ರೂ., ನಾಲ್ಕು ಚಕ್ರಗಳ ವಾಹನಕ್ಕೆ 1 ಸಾವಿರ ರೂ. ಉಪಕರ ವಿಧಿಸಿರುವುದು ಒಮ್ಮೆ ಮಾತ್ರ. ಇದರಿಂದ ವಾರ್ಷಿಕ 150 ಕೋಟಿ ರೂ. ಸಂಗ್ರಹವಾಗಲಿದೆ. ಈ ಹಣವನ್ನು ಅಸಂಘಟಿತ ವಲಯದ ಸಾರಿಗೆ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ'' ಎಂದು ಸದನಕ್ಕೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ: ಏನಿದು ಮಸೂದೆ?
''ರಾಜ್ಯದ ಸಾರಿಗೆ ವಲಯದಲ್ಲಿ ಬರುವ ಬಸ್, ಆಟೋ, ಲಾರಿ ಸೇರಿ ಇತರ ವಾಹನಗಳ ಚಾಲಕರು, ನಿರ್ವಾಹಕರು, ಕ್ಲೀನರ್, ಪಂಚರ್ ತೆಗೆಯುವವರು ಸೇರಿ ಅಂದಾಜು 40 ಲಕ್ಷ ಜನರು ದುಡಿಯುತ್ತಿದ್ದಾರೆ. ಇವರ ಕಲ್ಯಾಣ ಕಾರ್ಯಕ್ರಮಕ್ಕೆ ಅನುಕೂಲ ಆಗಲಿದೆ'' ಎಂದರು.
ಇದಕ್ಕೆ ವಿರೋಧಿಸಿದ ವಿಪಕ್ಷ ಸದಸ್ಯರು, ''ದ್ವಿಚಕ್ರ ವಾಹನಕ್ಕೆ ಹೆಚ್ಚುವರಿ ತೆರಿಗೆ ವಿಧಿಸಬೇಡಿ. ಬೇಕಾದರೆ, ನಾಲ್ಕು ಚಕ್ರ ವಾಹನಗಳಿಗೆ ಹೆಚ್ಚಿಗೆ ತೆರಿಗೆ ಹಾಕಿ'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಧ್ಯರಾತ್ರಿವರೆಗೆ ವಿಧಾನಸಭೆ; ಬ್ರೇಕ್ ಇಲ್ಲದೇ 15 ತಾಸು ಕಲಾಪ ನಡೆಸಿದ ಸ್ಪೀಕರ್ ಖಾದರ್