ಬೆಂಗಳೂರು:ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಗಣನೀಯವಾಗಿ ಪರಿಶಿಷ್ಠರಿಗೆ ಮೀಸಲಿಟ್ಟ ಅನುದಾನ ಬಳಕೆ ಮಾಡಲಾಗುತ್ತಿದೆ. ಗ್ಯಾರಂಟಿಗಳಿಗೆ ಬಹುಪಾಲು ಹಣ ಬಳಕೆಯಾಗುತ್ತಿರುವುದು ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣ. ಈ ಸಂಬಂಧ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಅಷ್ಟಕ್ಕೂ ಈವರೆಗೆ ರಾಜ್ಯ ಸರ್ಕಾರ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಿಂದ ಪಂಚ ಗ್ಯಾರಂಟಿಗಳಿಗಾಗಿ ಹಣ ಬಿಡುಗಡೆ ಮಾಡಿದ್ದೆಷ್ಟು ಎಂಬ ಸಮಗ್ರ ವರದಿ ಇಲ್ಲಿದೆ.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಎಸ್ಸಿಎಸ್ಪಿ ಮತ್ತು ಟಿಎಸ್ಪಿ) ಅನುದಾನ ಬಳಕೆ ಮಾಡುತ್ತಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ತೀವ್ರ ವಿರೋಧದ ಮಧ್ಯೆಯೂ ಸರ್ಕಾರ ಈಗಾಗಲೇ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಿಂದ ಪಂಚ ಗ್ಯಾರಂಟಿಗಳಿಗಾಗಿ ಹಣ ಬಿಡುಗಡೆ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ತೀವ್ರ ಕಸರತ್ತಿನೊಂದಿಗೆ ಪಂಚ ಗ್ಯಾರಂಟಿಗಳಿಗೆ ಹಣ ನಿರ್ವಹಣೆ ಮಾಡುತ್ತಿದೆ. 2024 - 25 ಸಾಲಿನಲ್ಲಿನ ಗ್ಯಾರಂಟಿಗಳಿಗಾಗಿ ಸುಮಾರು 52,000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ಈ ಪೈಕಿ ಪ್ರಮುಖವಾಗಿ, ದಲಿತ ಸಮುದಾಯಕ್ಕಾಗಿ ಮೀಸಲಿಡುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಎಸ್ಸಿಎಸ್ಪಿ ಟಿಎಸ್ಪಿ) ಅನುದಾನದಿಂದ ಗ್ಯಾರಂಟಿಗಳಿಗೆ ದೊಡ್ಡ ಪ್ರಮಾಣದ ಅನುದಾನ ಬಳಕೆ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಿಂದ 2024-25 ಸಾಲಿನಲ್ಲಿ ಅಂದಾಜು ಸುಮಾರು 14,282 ಕೋಟಿ ರೂ. ಹಣ ಹಂಚಿಕೆ ಮಾಡಿದೆ. ಈವರೆಗೆ ಅದರಲ್ಲಿ ಎಷ್ಟು ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಒಟ್ಟು SCSPTSP ಅನುದಾನ ಬಳಕೆ ಏನಿದೆ?:ಕೆಡಿಪಿ ಮಾಸಿಕ ಪ್ರಗತಿ ಅಂಕಿ - ಅಂಶಗಳ ಪ್ರಕಾರ, ಜನವರಿವರೆಗೆ ಎಸ್ಸಿಎಸ್ಪಿ ಟಿಎಸ್ಪಿ ಅನುದಾನದಿಂದ ಗ್ಯಾರಂಟಿಗಳಿಗೆ ಒಟ್ಟು 8,094 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಈ ಪೈಕಿ 8,043.57 ಕೋಟಿ ರೂ. ಹಣ ವೆಚ್ಚವಾಗಿದೆ. 2024-25 ಸಾಲಿನಲ್ಲಿ ಒಟ್ಟು 40,042 ಕೋಟಿ ರೂ. SCSPTSP ಅನುದಾನ ಹಂಚಿಕೆಯಾಗಿದೆ. ಅದರಲ್ಲಿ ಜನವರಿವರೆಗೆ ಗ್ಯಾರಂಟಿಗಳಿಗೆ ಸುಮಾರು 20.21%ರಷ್ಟು ಹಣ ಬಿಡುಗಡೆಯಾಗಿದೆ.
ಎಸ್ಸಿಎಸ್ಪಿ ಅನುದಾನದಿಂದ ಗ್ಯಾರಂಟಿಗಳಿಗೆ 9,980.48 ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜನವರಿವರೆಗೆ ಒಟ್ಟು 5,746.63 ಕೋಟಿ ರೂ. ಹಣ ಬಿಡುಗಡೆಯಾಗಿದೆ. 2024-25 ಸಾಲಿನಲ್ಲಿ ಒಟ್ಟು 28,527 ಕೋಟಿ ರೂ. ಎಸ್ಸಿಎಸ್ಪಿ ಅನುದಾನ ಹಂಚಿಕೆಯಾಗಿದೆ. ಈ ಪೈಕಿ ಜನವರಿವರೆಗೆ ಎಲ್ಲ ಇಲಾಖೆಗಳಿಗೆ 16,578 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು ಬಿಡುಗಡೆಯಾದ ಎಸ್ಸಿಎಸ್ಪಿ ಅನುದಾನದ ಪೈಕಿ ಗ್ಯಾರಂಟಿಗಳಿಗೇ ಗಣನೀಯ ಅಂದರೆ 35%ರಷ್ಟು ಹಣ ರಿಲೀಸ್ ಮಾಡಲಾಗಿದೆ.
ಇತ್ತ ಟಿಎಸ್ಪಿ ಅನುದಾನದಿಂದ ಗ್ಯಾರಂಟಿಗಳಿಗೆ ಪ್ರಸಕ್ತ ಸಾಲಿನಲ್ಲಿ 4,301.72 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಈ ಪೈಕಿ ಜನವರಿವರೆಗೆ ಪಂಚ ಗ್ಯಾರಂಟಿಗಳಿಗೆ 2,347.57 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 2024-25 ಸಾಲಿನಲ್ಲಿ ಒಟ್ಟು 11,515 ಕೋಟಿ ರೂ. ಟಿಎಸ್ಪಿ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜನವರಿವರೆಗೆ ಎಲ್ಲಾ ಇಲಾಖೆಗಳಿಗೆ 5,756 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಒಟ್ಟು ಬಿಡುಗಡೆಯಾದ ಟಿಎಸ್ಪಿ ಅನುದಾನದಲ್ಲಿ ಗ್ಯಾರಂಟಿಗಳಿಗೆ ಬಹುಪಾಲು ಅಂದರೆ ಶೇ 41ರಷ್ಟು ಹಣ ಬಿಡುಗಡೆಗೊಂಡಿದೆ.