ಚಿಕ್ಕಮಗಳೂರು: ಕಾಫಿ ನಾಡಿನ ಜೀವನದಿಯ ಸಾಲಿನಲ್ಲಿ ಬರುವ ನದಿಗಳಲ್ಲಿ 'ಹೇಮಾವತಿ' ಕೂಡ ಒಂದು. ಜಾವಳಿಯಿಂದ ಗೊರೂರು ಅಣೆಕಟ್ಟೆವರೆಗೂ ಹರಿದು ಸಾವಿರಾರು ಎಕರೆ ಪ್ರದೇಶಗಳಿಗೆ ನೀರುಣಿಸುವ ನದಿ ಈಗ ಬತ್ತಿ ಹೋಗುತ್ತಿದೆ. ನೀರಿನ ಹರಿವಿನಲ್ಲಿ ಗಣನೀಯ ಇಳಿಕೆಯಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಅತಂಕ ಮೂಡಿದೆ. ಅದೆಷ್ಟೋ ವರ್ಷಗಳ ನಂತರ ಹೇಮಾವತಿಯಲ್ಲಿ ಇಂತಹ ಹರಿವು ನೋಡಿ ಸಾರ್ವಜನಿಕರು ಹಾಗೂ ಅನ್ನದಾತರು ಕಂಗಾಲಾಗಿದ್ದು, ಏನು ಪರಿಸ್ಥಿತಿ ಬಂತಪ್ಪ ಎಂದು ಚಿಂತಿಸುತ್ತಿದ್ದಾರೆ.
ಕಾಫಿನಾಡಿನ ಪಂಚನದಿಗಳ ಸಾಲಿನಲ್ಲಿ ಬರುವ ನದಿಗಳಲ್ಲಿ ಹೇಮಾವತಿ ಕೂಡ ಒಂದು. ವರ್ಷಪೂರ್ತಿ ತುಂಬಿ ಹರಿಯೋ ನದಿಯಿದು. ಮಳೆಗಾಲದಲ್ಲಿ ಉಕ್ಕಿ ಹರಿದರೆ, ಉಳಿದಂತೆ ನಿತ್ಯವೂ ಶಾಂತಳಾಗಿ ಹರಿಯುತ್ತಿದ್ದ ಹೇಮಾವತಿ ಈ ವರ್ಷದ ಬರಕ್ಕೆ ತತ್ತರಿಸಿದ್ದಾಳೆ. ನದಿಯ ಹರಿವಿನಲ್ಲಿ ಇಳಿಕೆ ಕಂಡಿದೆ. ಅರ್ಧ ಅಡಿಯಲ್ಲಿ ಮಾತ್ರ ನೀರು ಹರಿಯುತ್ತಿದೆ. ಬಂಕೇನಹಳ್ಳೀಯ ಸಮೀಪ ನಿಂತ ನೀರಿನಂತಾಗಿದ್ದು, ಎಲ್ಲೋ ಸ್ವಲ್ಪ ನೀರಿನ ಹರಿವು ಮಾತ್ರ ಕಾಣಿಸುತ್ತಿರೋದನ್ನು ಕಂಡ ಸ್ಥಳೀಯರಂತೂ ಬೇಸರ ಹೊರಹಾಕಿದ್ದಾರೆ.
ಇನ್ನು ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಉಗಮವಾಗಿ ಗೊರೂರು ಅಣೆಕಟ್ಟು ಸೇರೋ ಹೇಮಾವತಿ ನದಿ ಸಾವಿರಾರು ಎಕರೆ ಕೃಷಿ ಭೂಮಿಗೆ ಜೀವ ತುಂಬುತ್ತಿದ್ದಳು. ಇದಲ್ಲದೇ ಮೂಡಿಗೆರೆ ಪಟ್ಟಣ ಸೇರಿದಂತೆ ಬಣಕಲ್, ಗೋಣಿಬೀಡು ಸೇರಿ ಹಲವು ಗ್ರಾಮ ಪಂಚಾಯಿತಿಗಳಿಗೆ ಹೇಮಾವತಿಯೇ ಕುಡಿಯುವ ನೀರಿನ ಮೂಲವಾಗಿತ್ತು. ಆದ್ರೆ ಈ ವರ್ಷವಂತೂ ಹರಿಯೋದನ್ನೇ ನದಿ ಮರೆತಂತಿದೆ. ಸರಿಯಾದ ಸಮಯಕ್ಕೆ ಮಳೆ ಆಗದಿರುವುದು, ಏರುತ್ತಿರುವ ತಾಪಪಾನ ಇದಕ್ಕೆ ಪ್ರಮುಖ ಕಾರಣ. ಕಳೆದ 65 ವರ್ಷದಿಂದ ಈ ರೀತಿಯ ಪರಿಸ್ಥಿತಿಯನ್ನು ಸ್ಥಳೀಯರು ನೋಡಿರಲಿಲ್ಲ. ಬೇಸಿಗೆಯಲ್ಲಂತೂ ಜನರು ಇಲ್ಲೇ ಇರುತ್ತಿದ್ದರು. ಆದ್ರೆ ಈ ಬಾರಿ ಹಲವೆಡೆ ಅರ್ಧ ಅಡಿಯೂ ನೀರಿಲ್ಲ. ಕಾಫಿ ತೋಟಗಳಿಗೆ, ಕೃಷ್ಟಿ ಭೂಮಿಗಳಿಗೆ ನೀರಿಲ್ಲದೇ ರೈತರು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.