ಕರ್ನಾಟಕ

karnataka

ETV Bharat / state

ದಂತ ವೈದ್ಯರನ್ನು ತಾಲೂಕು ವೈದ್ಯಾಧಿಕಾರಿನ್ನಾಗಿ ನೇಮಿಸಲಾಗದು: ಹೈಕೋರ್ಟ್ - High Court - HIGH COURT

ನಿಯೋಜಿಸಿದ್ದ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಹಿರಿಯ ದಂತ ವೈದ್ಯಾಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ, ಅರ್ಜಿ ವಜಾಗೊಳಿಸಿ ದಂತ ವೈದ್ಯರನ್ನು ತಾಲೂಕು ವೈದ್ಯಾಧಿಕಾರಿನ್ನಾಗಿ ನೇಮಿಸಲಾಗದು ಎಂದು ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Apr 19, 2024, 9:17 AM IST

ಬೆಂಗಳೂರು :ಎಂಬಿಬಿಎಸ್ ಪದವಿ ಪಡೆಯದ ಹಿನ್ನೆಲೆಯಲ್ಲಿ ದಂತ ವೈದರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಆರೋಗ್ಯ ಕಚೇರಿಯ ವೈದ್ಯಾಧಿಕಾರಿಯಾಗಿ ತಮ್ಮ ನಿಯೋಜಿಸಿದ್ದ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಹಿರಿಯ ದಂತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಯು. ಪಾಟೀಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಐ. ಅರುಣ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಸರ್ಕಾರ 2021ರ ಜೂ.1ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (ಸಾಮಾನ್ಯ ಕರ್ತವ್ಯನಿರತ ವೈದ್ಯಾಧಿಕಾರಿ) ತಾಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹರಾಗಿರುತ್ತಾರೆ. 1992ರ ಜು.17ರಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಹೊರಡಿಸಿದ ಅಧಿಸೂಚನೆ ಪ್ರಕಾರ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಎಂಬಿಬಿಎಸ್ ಪದವಿ ಪಡೆದಿರಬೇಕು. ಪ್ರಕರಣದಲ್ಲಿ ಅರ್ಜಿದಾರರು ದಂತ ವೈದ್ಯರಾಗಿದ್ದು, ಎಂಬಿಬಿಎಂಪಿ ಪದವಿ ಪಡೆದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಮತ್ತು ಹಿರಿಯ ದಂತ ವೈದ್ಯ ಆರೋಗ್ಯ ಅಧಿಕಾರಿ, ರಾಜ್ಯ ಸರ್ಕಾರ ಸೇವೆಗಳ ಅಡಿಯಲ್ಲಿ ಬರುವ ಹುದ್ದೆಗಳಾಗಿವೆ. ಹಿರಿಯ ದಂತ ಆರೋಗ್ಯ ಅಧಿಕಾರಿಯು ಬಿಡಿಎಸ್ ಪದವೀಧರರು. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಎಂಬಿಬಿಎಸ್ ಪದವೀಧರರು. ಈ ಹುದ್ದೆಗಳು ಬಿಟ್ಟು ಕರ್ನಾಟಕ ಸಿವಿಲ್ ಸೇವೆಗಳು (ವೈದ್ಯಕೀಯ ಅಧಿಕಾರಿಗಳೂ ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯ್ದೆ-2011ರ ಸೆಕ್ಷನ್ 2(ಜಿ) ಅಡಿಯ ಶೆಡ್ಯೂಲ್-1 ಅಡಿ ಇತರ ಅಧಿಕಾರಿಗಳ ಹುದ್ದೆಗಳು ಇವೆ. ಅವರೆಲ್ಲರೂ ಆರೋಗ್ಯ ಅಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ. ಆದರೆ, ಅವರು ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್‌ಗಳು ಅಲ್ಲ. ಇದು ಪ್ರತ್ಯೇಕ ಕೆಟಗರಿಯಾಗಿದೆ. ಅವರು ವೈದ್ಯಾಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರು ಎಂಬಿಬಿಎಸ್ ಪದವೀಧರರು ಅಲ್ಲ. ಅವರನ್ನು ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಆಗಿ ಪರಿಗಣಿಸಲಾಗದು. ಅವರು ತಾಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹರಲ್ಲ. ಅದರಂತೆ ಕುಂದಗೋಳ ತಾಲೂಕು ಆರೋಗ್ಯ ಅಧಿಕಾರಿಯಾಗಿ ಅರ್ಜಿದಾರರನ್ನು ನಿಯೋಜನೆ ಮಾಡಿರುವುದು ತಪ್ಪು. ಅದನ್ನು ಅರಿತು ಕೊಂಡೇ ಸರ್ಕಾರ ತನ್ನ ಆದೇಶ ಹಿಂಪಡೆದುಕೊಂಡಿದೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ :ಅರ್ಜಿದಾರರು ದಂತವೈದ್ಯರಾಗಿದ್ದು, ಸರ್ಕಾರಿ ಉದ್ಯೋಗಿಯಾಗಿದ್ದಾರೆ. 2023ರ ಜ.2ರಂದು ಕುಂದಗೋಳ ತಾಲೂಕು ಆರೋಗ್ಯಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಆದರೆ, ಅದು ಅವಧಿಪೂರ್ವ ವರ್ಗಾವಣೆ ಎಂಬ ಕಾರಣಕ್ಕೆ ವರ್ಗಾವಣೆ ಆದೇಶವನ್ನು 2023ರ ಸೆ.8ರಂದು ರದ್ದುಪಡಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ತಾಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹತೆ ಹೊಂದಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿ ಕೆಎಟಿ 2023ರ ಜ.24ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮವಿ ಸಲ್ಲಿಸಿದ್ದರು.

ABOUT THE AUTHOR

...view details