ಹಾವೇರಿ :ಜಿಲ್ಲೆಯಾದ್ಯಂತ ಕಳೆದ ಮೇ ತಿಂಗಳಿಂದ ಏರುಗತಿಯಲ್ಲಿದ್ದ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇದೀಗ ಇಳಿಮುಖವಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಆಗಮಿಸುವ ಜ್ವರಪೀಡಿತರ ಸಂಖ್ಯೆ ಕಳೆದ ಒಂದು ವಾರದಿಂದ ಇಳಿಮುಖವಾಗಿದೆ. ಡೆಂಗ್ಯೂ ಸೇರಿದಂತೆ ಇತರ ಜ್ವರಪೀಡಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ ಆರ್ ಹಾವನೂರು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಅವರು, ಏಪ್ರಿಲ್ನಿಂದ ಆರಂಭವಾಗಿದ್ದ ಡೆಂಗ್ಯೂ ಮತ್ತು ಇತರ ಜ್ವರದ ಪ್ರಕರಣಗಳ ಸಂಖ್ಯೆ ಜುಲೈ ಅಂತ್ಯದವರೆಗೆ ಏರಿಕೆಯಾಗುತ್ತಲೇ ಸಾಗಿದ್ದವು. ಇದೀಗ ಆಗಸ್ಟ್ ಮೊದಲ ವಾರದಿಂದ ಜಿಲ್ಲಾಸ್ಪತ್ರೆಗೆ ಆಗಮಿಸುವ ಡೆಂಗ್ಯೂ ಮತ್ತು ಇತರ ಜ್ವರಪೀಡಿತರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಮೊದಮೊದಲು ಪ್ರತಿದಿನ ಜಿಲ್ಲಾಸ್ಪತ್ರೆಗೆ ದಿನಕ್ಕೆ 110 ರಿಂದ 120 ರೋಗಿಗಳು ಜ್ವರದಿಂದ ಬಾಧಿತರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದರು. ಅದರಲ್ಲಿ ಶಂಕಿತ ಡೆಂಗ್ಯೂ ಸೇರಿದಂತೆ ಇತರ ಜ್ವರಪೀಡಿತರು ಸಹ ದಾಖಲಾಗುತ್ತಿದ್ದರು. ಈಗ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಪ್ರಸ್ತುತ ದಿನಗಳಲ್ಲಿ ದಿನಕ್ಕೆ 60 ರಿಂದ 70 ಜ್ವರಪೀಡಿತರು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಶಂಕಿತ ಡೆಂಗ್ಯೂ ಪ್ರಕರಣಗಳಾಗಿದ್ದು, ಅವುಗಳಲ್ಲಿ
ಎಲೀಸಾ ಪರೀಕ್ಷೆಯಲ್ಲಿ ಒಬ್ಬರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ಆದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಾರ್ವಜನಿಕರು ನಿರ್ಲಕ್ಷ್ಯವಹಿಸದಂತೆ ಮನವಿ ಮಾಡಿದ್ದಾರೆ.
ಮಳೆಗಾಲ ಮುಗಿಯುವವರೆಗೆ ಈ ಡೆಂಗ್ಯೂ, ಮಲೇರಿಯಾ ಸೇರಿದಂತೆ ಇತರ ಜ್ವರ ಹರಡುವ ಸೊಳ್ಳೆಗಳ
ಸಂಖ್ಯೆ ಅಧಿಕವಾಗಿರುತ್ತದೆ. ಈ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದಲ್ಲದೆ ಮನೆಯ ಸುತ್ತಮುತ್ತ ಸ್ವಚ್ಛ ಪರಿಸರ ಇರುವಂತೆ ನೋಡಿಕೊಳ್ಳುವಂತೆ ಹಾವನೂರು ತಿಳಿಸಿದ್ದಾರೆ.