ಹುಬ್ಬಳ್ಳಿ(ಧಾರವಾಡ):ಭಾರತೀಯ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಅವರಿಗೆ ಸಾಲು ಸಾಲು ಬೆದರಿಕೆಗಳು ಬರುತ್ತಿವೆ. ಕೊಲೆ ಮಾಡೋದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕುತ್ತಿದೆ. ಇತ್ತೀಚೆಗಷ್ಟೇ ನಟನಿಗೆ ಹೊಸ ಕೊಲೆ ಬೆದರಿಕೆ ಬಂದಿತ್ತು. ಈ ಪ್ರಕರಣದ ಆರೋಪಿ ಹುಬ್ಬಳ್ಳಿಯಲ್ಲಿದ್ದಾನೆ ಎಂಬ ಮಾಹಿತಿ ಮುಂಬೈ ಪೊಲೀಸರಿಗೆ ಸಿಕ್ಕಿದ್ದು, ತಂಡ ಹುಬ್ಬಳಿಗೆ ಆಗಮಿಸಿ ಶೋಧ ನಡೆಸುತ್ತಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ವ್ಯಕ್ತಿಯೋರ್ವ ಸಲ್ಮಾನ್ಗೆ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಲಾಗಿತ್ತು. ಕೃಷ್ಣಮೃಗ ಬೇಟೆ ಕೇಸ್ನಲ್ಲಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದ. ಈತ ಕರ್ನಾಟಕದಿಂದ ಈ ಬೆದರಿಕೆ ಹಾಕಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಮುಂಬೈ ಪೊಲೀಸರು ಹುಬ್ಬಳ್ಳಿಗೆ ಬಂದಿದ್ದು, ಆರೋಪಿಯ ಹುಡುಕಾಟದಲ್ಲಿದ್ದಾರೆ.
ಬೆದರಿಕೆ ಕರೆ ಬಳಿಕ ನಟ ಸಲ್ಮಾನ್ ಖಾನ್ಗೆ ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಈ ಸಂದೇಶ ಬಂದಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.