ಬೆಂಗಳೂರು:ತನ್ನ ಪತ್ನಿ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನನ್ನು ಬಾರ್ಗೆ ಕರೆದೊಯ್ದು ಕುಡಿಸಿ ಮದ್ಯದ ಅಮಲಿನಲ್ಲಿ ಲಾಂಗ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಯನ್ನ ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರ್ಜುನ್ ಬಂಧಿತ ಆರೋಪಿ. ಹಲ್ಲೆಗೊಳಗಾದ ಕಿರಣ್ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾನೆ. ಫೆ.4 ರಾತ್ರಿ ತಲಘಟ್ಟಪುರ ಠಾಣಾ ವ್ಯಾಪ್ತಿಯ ಗಾಣಿಗರಪಾಳ್ಯದ ಸರ್ಕಲ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಕಿರಣ್, ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ. ಆರೋಪಿ ಅರ್ಜುನ್ ಕಾರು ಚಾಲಕನಾಗಿದ್ದ. ಕಳೆದೊಂದು ವರ್ಷದಿಂದ ಇಬ್ಬರು ಸ್ನೇಹಿತರಾಗಿದ್ದಾರೆ. ಆಗಾಗ ಅರ್ಜುನ್ ಮನೆಗೆ ಕಿರಣ್ ಬಂದು ಹೋಗುತ್ತಿದ್ದ. ಈ ಮಧ್ಯೆ ಸ್ನೇಹಿತನ ಪತ್ನಿಯನ್ನ ಸಂಪರ್ಕಿಸಲು ಹವಣಿಸುತ್ತಿದ್ದ. ನಿರಂತರವಾಗಿ ಕರೆ ಹಾಗೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸುತ್ತಿದ್ದ. ಈ ವಿಷಯ ಅರಿತ ಆರೋಪಿ ಅರ್ಜುನ್ ಕೋಪಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತ್ನಿಗೆ ನಿರಂತರ ಕರೆಗೆ ಮಾಡುವುದನ್ನ ಮುಂದುವರಿಸಿದ್ದ ಸ್ನೇಹಿತನಿಗೆ ಬುದ್ಧಿ ಕಲಿಸಲು ಅರ್ಜುನ್ ಸಂಚು ರೂಪಿಸಿದ್ದ. ಇದರಂತೆ ಫೆ.4ರಂದು ಕಿರಣ್ನನ್ನು ಬಾರ್ಗೆ ಕರೆದೊಯ್ದು ಚೆನ್ನಾಗಿ ಕುಡಿಸಿದ್ದ. ಮನೆಯಿಂದ ಹೊರಡುವಾಗಲೇ ಲಾಂಗ್ ತೆಗೆದುಕೊಂಡು ಹೋಗಿದ್ದ ಅರ್ಜುನ್, ಮದ್ಯ ಸೇವನೆ ಬಳಿಕ ಗಾಣಿಗಾರ ಸರ್ಕಲ್ ಬಳಿ ಕಿರಣ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಲಾಂಗ್ನಿಂದ ಸ್ನೇಹಿತನ ಕುತ್ತಿಗೆ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದ. ಬಳಿಕ ಸ್ಥಳೀಯರ ನೆರವಿನಿಂದ ಕಿರಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕಿರಣ್ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.