ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಕೇರಳದ ಲಾರಿ ಹಾಗೂ ಮೂವರ ದೇಹಗಳಿಗಾಗಿ ಎರಡು ತಿಂಗಳ ಬಳಿಕ ಮತ್ತೆ ಕಾರ್ಯಾಚರಣೆ ನಡೆಯುತ್ತಿದೆ. ನದಿಗೆ ಬಿದ್ದು ನಾಪತ್ತೆಯಾಗಿದ್ದ ಗ್ಯಾಸ್ ಟ್ಯಾಂಕರ್‌ವೊದರ ಟೈರ್ ಚಸ್ಸಿ, ಮರದ ತುಂಡು ಸಿಕ್ಕಿವೆ. ಆದರೆ, ಮೃತದೇಹಗಳ ನಿರೀಕ್ಷೆಯಲ್ಲಿ ಆಹಾರ ತ್ಯಜಿಸಿ ಕಾದು ಕುಳಿತಿದ್ದ ಕುಟುಂಬಸ್ಥರಿಗೆ ಎರಡನೇ ದಿನವೂ ನಿರಾಸೆಯಾಯಿತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೂರನೇ ಹಂತದ ಶೋಧ ಕಾರ್ಯಾಚರಣೆ ಚುರುಕುಗೊಂಡಿದೆ. ನದಿಗೆ ಬಿದ್ದಿರುವ ಕೇರಳದ ಲಾರಿ ಹಾಗೂ ನಾಪತ್ತೆಯಾಗಿರುವ ಮೂವರ ದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶುಕ್ರವಾರ ಗೋವಾದಿಂದ ಬಂದಿದ್ದ ಡ್ರಜ್ಜಿಂಗ್ ಯಂತ್ರದ ಮೂಲಕ ನದಿಗೆ ಬಿದ್ದ ಮಣ್ಣು ತೆರವು ಕಾರ್ಯ ಪ್ರಾರಂಭಿಸಲಾಗಿತ್ತು. ಶನಿವಾರದ ಕಾರ್ಯಾಚರಣೆಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಸಹಕರಿಸಿದರು.
ಶಿರೂರಿನಲ್ಲಿ ಗುಡ್ಡ ಕುಸಿದು ನಾಪತ್ತೆಯಾದವರ ಮೃತದೇಹಗಳಿಗೆ ಮತ್ತೆ ಶೋಧ ಕಾರ್ಯಾಚರಣೆ (ETV Bharat) "ನದಿಯ ಆಳಕ್ಕೆ ಹೋಗಿ ಹುಡುಕಾಟ ನಡೆಸಿದ ಈಶ್ವರ್ ಮಲ್ಪೆ ಅವರಿಗೆ ಲಾರಿಯೊಂದರ ಟೈರ್ ಸಿಕ್ಕಿತು. ನಾಪತ್ತೆಯಾದ ಅರ್ಜುನ್ ಅವರ ಲಾರಿ ಇರಬಹುದೆಂದು ಅಂದಾಜಿಸಿ ಟೈರನ್ನು ಮೇಲಕ್ಕೆತ್ತುವ ಕಾರ್ಯ ನಡೆಯಿತು. ಆದರೆ ಅದು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಗ್ಯಾಸ್ ಟ್ಯಾಂಕರ್ ಒಂದರ ಟೈರ್ ಹಾಗೂ ಚಸ್ಸಿ ಎಂದು ಗುರುತಿಸಲಾಯಿತು. ಕಾರ್ಯಾಚರಣೆಯನ್ನು ಮುಂದುವರಿಸಿದ್ದು ನಮ್ಮವರ ಮೃತದೇಹಗಳು ಇಂದು ಅಥವಾ ನಾಳೆ ಸಿಗುವ ಸಾಧ್ಯತೆ ಇದೆ" ಎಂದು ಸ್ಥಳೀಯ ಮಹೇಶ್ ನಾಯ್ಕ ತಿಳಿಸಿದರು.
"ನಮ್ಮ ಮಾವನ ಮೃತದೇಹ ಸಿಗುವ ವಿಶ್ವಾಸವಿದೆ. ಜಿಲ್ಲಾಡಳಿತ, ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಪ್ರಯತ್ನ ಮುಂದುವರಿಸಿದ್ದು ಹೇಗಾದರೂ ಮಾಡಿ ನಮ್ಮವರ ಮೃತದೇಹವನ್ನು ಹುಡುಕಿಕೊಡಿ" ಎಂದು ಮೃತ ಜಗನ್ನಾಥ ನಾಯ್ಕ ಅವರ ಅಳಿಯ ಮನವಿ ಮಾಡಿದರು.
ಇದನ್ನೂ ಓದಿ:ದಡದಿಂದ 15 ಅಡಿ ದೂರದಲ್ಲಿ ಟ್ಯಾಂಕರ್ ಲಾರಿ ಟಯರ್, ಕ್ಯಾಬಿನ್ ಪತ್ತೆ: ಹೊರತೆಗೆದ ಡ್ರೆಜ್ಜಿಂಗ್ ಯಂತ್ರ - lorry tire Found in Gangavali