ಹಾಸನ:ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪ್ರಾಯೋಗಿಕವಾಗಿ ಎತ್ತಿನಹೊಳೆ ಯೋಜನೆಯ ಚೆಕ್ ಡ್ಯಾಂನಿಂದ ನೀರು ಎತ್ತುವ ಕಾರ್ಯಕ್ಕೆ ತಾಯಿ ಚಾಮುಂಡೇಶ್ವರಿ ನೆನಪಿಸಿಕೊಂಡು ಮೋಟರ್ ಪಂಪ್ ಆನ್ ಮಾಡಿದರು.
ಸಕಲೇಶಪುರ ತಾಲೂಕಿನ, ಕುಂಬರಡಿ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಡಿಕೆಶಿ, "ಎತ್ತಿನಹೊಳೆ ನನ್ನ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇವತ್ತು ತಾಯಿ ಗಂಗೆಗೆ ನಮಸ್ಕಾರ ಸಲ್ಲಿಸಿ ಟ್ರಯಲ್ ರನ್ ಮಾಡಲು ಬಂದಿದ್ದೇನೆ. ನಮ್ಮ ಅಧಿಕಾರಿಗಳು ಬಂದು ನನ್ನ ಹತ್ರ ದಾಖಲೆ, ವಿಡಿಯೋಗಳನ್ನು ತೋರಿಸಿದರು. ಆದರೂ ನಾನು ನಾನೇ ಖುದ್ದಾಗಿ ಕಣ್ಣಲ್ಲೇ ನೋಡಬೇಕು ಅಂತ ಹೇಳಿ ನಾನು ನಮ್ಮ ಹಿರಿಯ ಶಾಸಕರೆಲ್ಲಾ ಬಂದು ಟ್ರಯಲ್ ರನ್ ಪ್ರಾರಂಭ ಮಾಡಿದ್ದೇವೆ. ನಿಮಿಗೆಲ್ಲಾ ತಿಳಿದಿರುವಂತೆ ಈ ಹಿಂದೆ ಬಂದು ಡೆಡ್ಲೈನ್ ಕೊಟ್ಟುಬಿಟ್ಟು ಹೋಗಿದ್ದೆ. ಆದರೆ 2-3 ತಿಂಗಳು ತಡವಾಗಿದೆ. ಇದರ ಮಧ್ಯೆ ಎಲ್ಲಾ ಸಮಸ್ಯೆಗಳನ್ನು ನಿರ್ವಹಣೆ ಮಾಡಿದ್ದೇವೆ. ಇನ್ನು ಸ್ವಲ್ಪ ಅರಣ್ಯ ಕೆಲಸ ಉಳಿದುಕೊಂಡಿದೆ. 8 ವೇರ್ ಅಲ್ಲಿ 5 ನಾನು ಚಾಲು ಮಾಡಿದ್ದೇನೆ. 1,500 ಕ್ಯೂಸೆಕ್ ನೀರು ಇಂದು ಎತ್ತಿದ್ದೇವೆ. ಇನ್ನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಒಳ್ಳೆ ಶುಭದಿನ, ಶುಭಗಳಿಗೆ, ಶುಭ ಮುಹೂರ್ತ ನೋಡಿ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಅವರ ಕೈಯಲ್ಲಿ ಚಾಲನೆ ಮಾಡಿಸುವಂತ ಕೆಲಸವನ್ನು ಮಾಡುತ್ತೇನೆ" ಎಂದರು.