ಕರ್ನಾಟಕ

karnataka

ETV Bharat / state

ಕೆಲವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ: ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಕಿಡಿ - D K Shivakumar

ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

By ETV Bharat Karnataka Team

Published : Jul 5, 2024, 5:28 PM IST

DCM SLAMS
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ (ETV Bharat)

ಬೆಂಗಳೂರು:"ಮೂಡಾ ಹಗರಣ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಹಗರಣ ಹೊರಬರುವಲ್ಲಿ ಡಿಸಿಎಂ ಶಿವಕುಮಾರ್ ಕೈವಾಡವಿದೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಮಾಡಿರುವ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗೆ ಡಿಕೆ ಶಿವಕುಮಾರ ಉತ್ತರಿಸಿದರು.

ಸಿಡಿ ಫ್ಯಾಕ್ಟರಿ ನಂತರ ಈಗ ಮೂಡಾ ಫ್ಯಾಕ್ಟರಿ ಹೊರಬರುತ್ತಿದೆ ಎಂಬ ಕುಮಾರಸ್ವಾಮಿ ಟೀಕೆಗೆ, "ಕೆಲವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ" ಎಂದು ತಿರುಗೇಟು ಕೊಟ್ಟರು.

ಮಂಡ್ಯದಲ್ಲಿ ತಾವು ಮಾಡುತ್ತಿರುವ ಜನತಾದರ್ಶನಕ್ಕೆ ಅಧಿಕಾರಿಗಳು ಹೋಗಬಾರದೆಂದು ರಾಜ್ಯ ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, "ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ. ಹಳ್ಳಿ-ಹಳ್ಳಿ ತಿರುಗಲಿ, ಯಾರು ಬೇಡ ಎಂದರು. ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ. ನಾವು ದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ಬಳಸಿಕೊಳ್ಳಲು ಆಗುತ್ತದೆಯೇ? ಜನರಿಗೆ ಹೋಗಬೇಡಿ ಎಂದು ಹೇಳಲು ಆಗುತ್ತದೆಯೇ? ನನಗೆ ಈ ಆರೋಪದ ವಿಚಾರ ಗೊತ್ತೇ ಇಲ್ಲ. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವೂ ಇಲ್ಲ" ಎಂದರು.

ಇದನ್ನೂ ಓದಿ:ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಹೆಚ್‌ಡಿಕೆ - H D Kumaraswamy

"ಇಷ್ಟು ದಿನ ಹೊರಬರದ ಹಗರಣ ಇದಕ್ಕಿದ್ದಂತೆ ಹೇಗೆ ಹೊರಬಂತು? ಇದರ ಹಿಂದಿರುವ ಪಾತ್ರ ಯಾರದೆಂಬುದು ನನಗೆ ಗೊತ್ತಿದೆ" ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್​ ವಿರುದ್ಧ ಕುಮಾರಸ್ವಾಮಿ ಮೈಸೂರಿನಲ್ಲಿ ಇಂದು ವಾಗ್ದಾಳಿ ನಡೆಸಿದ್ದರು.

ಅಲ್ಲದೇ, "ಮುಡಾ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದರೆ, ಹಗರಣ ಹೊರಬರಲು ಕಾಂಗ್ರೆಸ್​ನ ಪ್ರಭಾವಿ, ಮುಖ್ಯಮಂತ್ರಿ ಆಕಾಂಕ್ಷಿಯ ಕೈವಾಡವಿದೆ. ಈಗ ಸಿಡಿ ಫ್ಯಾಕ್ಟರಿ ಬಂದ್ ಆಯಿತು, ಮುಡಾ ಫ್ಯಾಕ್ಟರಿ ಶುರುವಾಯಿತು" ಎಂದಿದ್ದರು.

ABOUT THE AUTHOR

...view details