ಬೆಂಗಳೂರು: ಬಿಜೆಪಿಯವರಿಗೆ ಗ್ಯಾರಂಟಿ ಮುಟ್ಟಲು ಬಿಡುವುದಿಲ್ಲ. ಅವರು ಅದಕ್ಕಾಗಿ ಹುಟ್ಟಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದರು.
ಪ್ರೆಸ್ ಕ್ಲಬ್ನಲ್ಲಿ ಇಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಗ್ಯಾರಂಟಿ ಮುಂದುವರಿಯಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅವರು ಅದಕ್ಕಾಗಿ ಹುಟ್ಟಿಲ್ಲ. ಗ್ಯಾರಂಟಿಯನ್ನು ಮುಟ್ಟಲು ಬಿಡುವುದಿಲ್ಲ. ಅವರು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಏನೂ ಮಾಡಕಾಗಲ್ಲ. ಗ್ಯಾರಂಟಿ ಇನ್ನೂ ಒಂಬತ್ತು ವರ್ಷ ಮುಂದುವರಿಯುತ್ತೆ. ರಾಜ್ಯದ ಹೆಣ್ಣುಮಕ್ಕಳ ಸ್ವಾಭಿಮಾನದ ಪ್ರಶ್ನೆ ಅದು. ಅದಕ್ಕೆ ಕೈ ಹಾಕಿದರೆ ಬಿಡುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಈ ಬಾರಿ ಬಿಜೆಪಿಗೆ ಏಕೆ ಮತ ಹಾಕಬೇಕು? ಆಪರೇಷನ್ ಕಮಲ ಮಾಡಿ ಅವರು ಸರ್ಕಾರ ರಚನೆ ಮಾಡಿದ್ದರು. ಬಳಿಕ ಅವರು ಜನರಿಗೆ ಕೊಟ್ಟ ಮಾತನ್ನು ಅಧಿಕಾರ ಬಂದಾಗ ಈಡೇರಿಸಿದ್ದಾರಾ? ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ. ಅವರಿಗೆ ಮಾತನಾಡುವ ನೈತಿಕತೆ ಇಲ್ಲ. ಮಹದಾಯಿ ವಿಚಾರದಲ್ಲಿ ಬಿಜೆಪಿಗೆ ಪರಿಸರ ಅನುಮೋದನೆ ಕೊಡಿಸಲು ಆಗಿಲ್ಲ. ಮೇಕೆದಾಟು ವಿಚಾರದಲ್ಲಿ ನಾವು ಹೋರಾಟ ಮಾಡಿದ್ದೆವು. ಮೇಕೆದಾಟು ವಿಚಾರದಲ್ಲೂ ನಿಮಗೆ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ನಿಮ್ಮ ಕೈಯಲ್ಲಿ ಎಲ್ಲಾ ಇದ್ದರೂ ನಿಮಗೆ ಏನೂ ಮಾಡ ಆಗಿಲ್ಲ. 10ಕ್ಕೂ ಹೆಚ್ಚು ಎಂಪಿಗಳಿಗೆ ಟಿಕೆಟ್ ನೀಡಿಲ್ಲ. ಯಾರಿಗೂ ಗೆಲ್ಲುವ ಮುಖ ಇಲ್ಲ ಅಂತ ಟಿಕೆಟ್ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಪ್ಪು ಹಣ ತರುತ್ತೇವೆ, ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದ್ರಿ. ನಿಮ್ಮ ಕಾಟದಿಂದ ದೊಡ್ಡ ಉದ್ಯಮಿಗಳು ದೇಶ ಬಿಟ್ಟು ಹೋಗ್ತಾ ಇದ್ದಾರೆ. ವಿಪಕ್ಷಗಳ ನಾಯಕರ ಮೇಲೆ ಐಟಿ, ಇಡಿ, ದಾಳಿ ಮಾಡಲಾಗುತ್ತಿದೆ. ನಿಮ್ಮ ಪಕ್ಷದವರು ಹರಿಶ್ಚಂದ್ರ ಮಕ್ಕಳಾ? ಎನ್ಡಿಎದವರು ಎಷ್ಟು ಜನ ಅಕ್ರಮದಲ್ಲಿದ್ದಾರೆ ಅಂತ ನಾನು ಪಟ್ಟಿ ಕೊಡಲಾ? ಎಲ್ಲರನ್ನೂ ಹೆದರಿಸಿ, ಬೆದರಿಸಿ ಗೆಲ್ಲಲು ಹೊರಟಿದ್ದೀರ. ಬೆಲೆ ಏರಿಕೆ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಿದ್ದೀರಾ. ತೆರಿಗೆ ಅನ್ಯಾಯದ ಸಂಬಂಧ ಡಿ.ಕೆ. ಸುರೇಶ್ ಹೇಳಿಕೆಯಲ್ಲಿ ಏನು ತಪ್ಪಿದೆ? ಎಂದು ಡಿಕೆಶಿ ಪ್ರಶ್ನಿಸಿದರು.
ಬಿಜೆಪಿ ನಾಯಕರು, ಜೆಡಿಎಸ್ನವರು ಎಷ್ಟು ಜನ ಕಾಂಗ್ರೆಸ್ ಸೇರುತ್ತಿದ್ದಾರೆ. ನಮ್ಮಿಂದ ದೂರ ಹೋದವರು ನಮ್ಮ ಕಡೆ ಬರುತ್ತಿದ್ದಾರೆ. ಎನ್ಡಿಎ, ಬಿಜೆಪಿಗೆ, ದಳದವರು ಮತ ಕೇಳುವ ಅರ್ಹತೆ ಕಳೆದುಕೊಂಡಿದ್ದಾರೆ. ಅವರು ಎಲ್ಲಾ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಜಾತಿ ಸಮೀಕ್ಷೆ ಸರಿಯಾಗಿ ಆಗಬೇಕು:ಜಾತಿ ಸಮೀಕ್ಷೆ ಸಂಬಂಧ ಪ್ರತಿಕ್ರಿಯಿಸುತ್ತ, ಜಾತಿ ಸಮೀಕ್ಷೆ ಎಲ್ಲಿ ತಪ್ಪಿದೆ. ಅದು ಸರಿಯಾಗಬೇಕು ಎಂಬುದು ನಮ್ಮ ಬೇಡಿಕೆ. ಜಾತಿ ಸಮೀಕ್ಷೆ ಎಲ್ಲರ ಮನೆ ಮನೆಗೆ ಹೋಗಬೇಕು. ಸ್ಯಾಂಪಲ್ ಸರ್ವೆ ಮಾಡಲು ಆಗಲ್ಲ. ಜಾತಿಗೆ ತಕ್ಕಂತೆ ಅವರಿಗೆ ನ್ಯಾಯ ಸಿಗಬೇಕು ಎಂದು ತಿಳಿಸಿದರು.