ಕರ್ನಾಟಕ

karnataka

ETV Bharat / state

ಸಚಿವ ಜಮೀರ್ 'ಕರಿಯ' ಹೇಳಿಕೆ ಸರಿಯಲ್ಲ, ಅದನ್ನು ನಾನು ಖಂಡಿಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಚಿವ ಜಮೀರ್ ಅಹ್ಮದ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಶಿವಕುಮಾರ್ Jameer ahamad
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : 6 hours ago

ಬೆಂಗಳೂರು:ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹ್ಮದ್ ಅವರ ಕರಿಯಾ ಹೇಳಿಕೆ ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಡಿಸಿಎಂ, ನಾನು ಆ ಹೇಳಿಕೆಯನ್ನು ಒಪ್ಪುವುದಿಲ್ಲ. ಅದನ್ನು ನಾನು ಖಂಡಿಸ್ತೇನೆ. ಜಮೀರ್ ಅವರು ಏನು ಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ. ನಾನು ಆನ್ ರೆಕಾರ್ಡ್ ಹೇಳ್ತೇನೆ ಆ ಹೇಳಿಕೆ ಸರಿಯಲ್ಲ. ಜಮೀರ್ ವಿರುದ್ಧ ಕ್ರಮದ ಬಗ್ಗೆ ಆಮೇಲೆ ನೋಡೋಣ ಎಂದರು.

ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಮಿಷದ ಬಗ್ಗೆ ಹೇಳಿದರು. ಇದೇ ಯತ್ನಾಳ್ ಅವರು ಸರ್ಕಾರ ಬೀಳಿಸಲು 1 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಖರೀದಿ ಮಾಡಿದ್ದ ಶಾಸಕರು ಕುರಿಗಳಲ್ಲವೇ?. ಬಿಜೆಪಿಯವರು ಕುರಿಗಳನ್ನೇ ಖರೀದಿ ಮಾಡಿದ್ದು. ದನ ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದಿರಲ್ಲವೇ ಎಂದು ಈ ಹಿಂದೆಯೂ ಪ್ರಶ್ನಿಸಿದ್ದೆವು. ಸಿ.ಪಿ.ಯೋಗೇಶ್ವರ್ ಅವರು ಅಶ್ವತ್ ನಾರಾಯಣ್ ಜೊತೆಗೂಡಿ ಶ್ರೀನಿವಾಸ್ ಗೌಡರ ಮನೆಗೆ ಹೋಗಿ ಹಣವಿಟ್ಟು ಬಂದೇ ಎಂದು ಸದನದಲ್ಲಿಯೇ ಹೇಳಿಲ್ಲವೇ ಎಂದು ಪ್ರಶ್ನಿಸಿದ್ದರು.

ಈ ಹಿಂದೆ ಆಡಳಿತದಲ್ಲಿ ಇದ್ದಾಗ ಬಿಜೆಪಿಯವರು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ನೀಡಿದ್ದರು ಎಂದು ಈ ಹಿಂದೆ ಯತ್ನಾಳ್ ಆರೋಪ ಮಾಡಿದ್ದರು. ವಿರೋಧ ಪಕ್ಷದ ಸದಸ್ಯರಾಗಿದ್ದಾಗಲೂ ಇದೇ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮಾಜಿ ಸಚಿವರಾಗಿದ್ದವರು, ಈ ರೀತಿಯ ಹೇಳಿಕೆಯನ್ನು ನೀಡಲು ಯತ್ನಾಳ್ ಅವರು ದಡ್ಡರೇ? ಎಂದು ಪ್ರಶ್ನಿಸಿದರು.

ಆಪರೇಷನ್ ಕಮಲದ ಬೆನ್ನಲ್ಲೇ, ಆಪರೇಷನ್ ಹಸ್ತ ನಡೆಯುತ್ತಿದೆ ಎನ್ನುವ ಬಿಜೆಪಿ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ₹1 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ ಎಂದು ಹೇಳಿದ್ದು ಬಿಜೆಪಿಯವರು. ಆಪರೇಷನ್ ಮೊದಲು ಅಲ್ಲಿಂದ ಪ್ರಾರಂಭವಾಗಲಿ. ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಮತ್ತೆ ಸಮರ್ಥಿಸುತ್ತೇನೆ ಎಂದರು.

ರಾಜ್ಯದ ಕೊರೊನಾ ಹಗರಣಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಲಾಗುವುದು ಎನ್ನುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿ, ಮೈಕಲ್ ಕುನ್ಹಾ ಅವರು ಕೊರೊನಾ ಹಗರಣಗಳ ಬಗ್ಗೆ ಮಾಡಿರುವ ತನಿಖೆಯ ವರದಿ ನಮಗೆ ಬಂದಿದೆ. ಇದರ ಬಗ್ಗೆ ಒಂದು ಸಭೆ ನಡೆಸಲಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಕುನ್ಹಾ ಅವರು ಹಗರಣದ ಹಣವನ್ನು ವಸೂಲಿ ಮಾಡಿ ಎಂದು ಹೇಳಿದ್ದಾರೆ. ಈ ರೀತಿ ಮಾಡಲು ಒಂದಷ್ಟು ನೀತಿ ನಿಯಮಗಳಿರುವ ಕಾರಣ ಇದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ವಕ್ಫ್ ನೋಟಿಸ್​ ಸಂಬಂಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಬಿಜೆಪಿಯವರ ಮೂರ್ಖತನ. ಅವರ ಕಾಲದಲ್ಲೇ ಪಹಣಿಗಳು ಬರುತ್ತಿವೆ. ಅದನ್ನ ನಮ್ಮವರು ನೋಡಿಲ್ಲ. ಈಗ ಅದರ ಬಗ್ಗೆ ಮಾತನಾಡ್ತಿದ್ದಾರೆ. ನಾವು ಮಾತಾಡಿದ್ರೆ ಮಾಧ್ಯಮದವರು ಕವರ್ ಮಾಡಲ್ಲ ಎಂದು ತಿಳಿಸಿದರು.

ಮಹಾರಾಷ್ಟ್ರ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ನಿನ್ನೆ ಪ್ರಚಾರಕ್ಕೆ‌ ಹೋಗಿದ್ದೆ. ಇವತ್ತು ಹೋಗ್ತಿದ್ದೇನೆ, ನಾಳೆನೂ‌ ಹೋಗ್ತೇನೆ. ನಮ್ಮ ಗ್ಯಾರೆಂಟಿ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಯೋಜನೆಗಳನ್ನು ಜಾರಿ ಮಾಡಿಲ್ಲ ಅಂತ ಪ್ರಚಾರ ಮಾಡ್ತಿದ್ದಾರೆ. ನಾವು ಎಲ್ಲರೂ ಅಲ್ಲಿಗೆ ಹೋಗ್ತಿದ್ದೇವೆ. ಜನ ಅಲ್ಲಿ ಬದಲಾವಣೆ ಬಯಸಿದ್ದಾರೆ. ಬೆಲೆ ಏರಿಕೆಯ ಬಿಸಿ ಅವರಿಗೆ ತಟ್ಟಿದೆ‌. ಅದಕ್ಕೆ 2100 ರೂ. ಕೊಡ್ತೇವೆ ಅಂತ ಹೇಳ್ತಿದ್ದಾರೆ. ನಾವು ಮುಂದೆ 3,000 ಕೊಡ್ತೇವೆ ಅಂತ ಹೇಳ್ತಿದ್ದೇವೆ. ನಮಗೆ ಅಲ್ಲಿ 160 ಸೀಟು ಬರುವ ವಿಶ್ವಾಸವಿದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಕುರಿತಂತೆ ವಕ್ಫ್​ ಸಚಿವ ಜಮೀರ್​ ಅಹ್ಮದ್ ಅವರು ಕರಿಯ ಅಂತಾ ಸಂಬೋಧಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಮತ್ತು ವಾಕ್ಸಮರಕ್ಕೆ ಕಾರಣವಾಗಿತ್ತು. ಸಚಿವ ಜಮೀರ್​ ವಿರುದ್ಧ ಜೆಡಿಎಸ್​ ಕಾರ್ಯಕರ್ತರು ಮುಖಂಡರು ಮುಗಿಬಿದ್ದು, ಕ್ಷಮೆಗೆ ಆಗ್ರಹಿಸಿದ್ದರು.

ತಮ್ಮ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಸಚಿವರು ಕ್ಷಮೆಯಾಚಿಸಿದ್ದರು. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ''ಕುಮಾರಸ್ವಾಮಿ ನನ್ನನ್ನು ಕುಳ್ಳ ಅಂತಾ ಕರೀತಾರೆ, ನಾನು ಅವರನ್ನು ಕರಿಯ ಅಂತಾ ಕರೆಯುತ್ತೇನೆ'' ಎಂದು ಸಚಿವ ಜಮೀರ್​ ಅಹ್ಮದ್​ ಸ್ಪಷ್ಟನೆ ಸಹ ನೀಡಿದ್ದರು.

ಇದನ್ನೂ ಓದಿ: ಜಮೀರ್ ಅಹಮದ್​ ಕುಳ್ಳ ಎಂದಿಲ್ಲ: ಹೆಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ

ಇದನ್ನೂ ಓದಿ:ಹೆಚ್‌ಡಿಕೆಗೆ 'ಕರಿಯಣ್ಣ' ಎಂದು ಸಂಬೋಧನೆ: ಕ್ಷಮೆಯಾಚಿಸಿದ ಸಚಿವ ಜಮೀರ್​ ಅಹ್ಮದ್​

ABOUT THE AUTHOR

...view details