ರಾಮನಗರ:''ನಾನು ಕಳೆದ 30 ವರ್ಷಗಳಿಂದ ಈ ತಾಲೂಕಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇಂದು ಈ ಪಂಚಾಯ್ತಿಯಲ್ಲಿರುವ ಜನ ಇತಿಹಾಸದಲ್ಲೇ ಬೇರೆ ಯಾವುದೇ ಪಕ್ಷಕ್ಕೆ ಸೇರಿಲ್ಲ. ನೀವೆಲ್ಲರೂ ನಮ್ಮ ಮಾತಿಗೆ ಬೆಲೆ ಕೊಟ್ಟು ಇಕ್ಬಾಲ್ ಹುಸೇನ್ ಅವರನ್ನು ವಿಧಾನಸಭೆಗೆ ಕಳುಹಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆ ಹಾರೋಹಳ್ಳಿ ಪ್ರಚಾರ ನಡೆಸಿ ಮಾತನಾಡಿದ ಅವರು, ''ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಡಿ.ಕೆ. ಸುರೇಶ್ ಅವರ ಹೋರಾಟಕ್ಕೆ ನಿನ್ನೆ ಸುಪ್ರೀಂಕೋರ್ಟ್ ಜಯ ಕೊಟ್ಟಿದೆ. ಕರ್ನಾಟಕಕ್ಕೆ ಬರಗಾಲದಲ್ಲಿ ಹಣ ನೀಡಬೇಕು. ತೆರಿಗೆ ಪಾಲನ್ನು ನ್ಯಾಯಯುತವಾಗಿ ನೀಡಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ಮುಂದಿನ ಒಂದು ವಾರದಲ್ಲಿ ಬರ ಪರಿಹಾರ ನೀಡಲಾಗುವುದು ಎಂದು ನ್ಯಾಯಾಲಯದಲ್ಲಿ ಹೇಳಿದೆ. ಇದು ಡಿ.ಕೆ. ಸುರೇಶ್ ಅವರ ಹೋರಾಟದ ಫಲ'' ಎಂದರು.
''ಡಿ.ಕೆ. ಸುರೇಶ್ ಅವರನ್ನು ಸಂಸದರಾಗಿ ಆಯ್ಕೆ ಮಾಡಿರುವ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಕರ್ನಾಟಕಕ್ಕೆ ಯಾವುದೇ ಹಣ ಬಾಕಿ ಇಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ಕೋರ್ಟ್ ಈಗ ಉತ್ತರ ನೀಡಿದೆ. ಇಲ್ಲಿ ದೇವೇಗೌಡರು ಬಂದು ಅವರ ಅಳಿಯನನ್ನು ಬಿಜೆಪಿ ಪಕ್ಷದಿಂದ ನಿಲ್ಲಿಸಿದ್ದಾರೆ. ಗೌಡರೇ, ಕುಮಾರಣ್ಣ ಇಷ್ಟು ದಿನ ನೀವು ಕಟ್ಟಿದ ಜನತಾ ದಳ ಏನಾಯ್ತು? ನಿಮ್ಮ ಅಳಿಯನನ್ನು ತೆನೆಹೊತ್ತ ರೈತ ಮಹಿಳೆ ಚಿಹ್ನೆಯಲ್ಲಿ ಯಾಕೆ ನಿಲ್ಲಿಸಲಿಲ್ಲ ಎಂದು ಈ ಜನರು ಕೇಳುತ್ತಿದ್ದಾರೆ. ಕುಮಾರಣ್ಣ ನಿನಗೆ ಪಕ್ಷ, ಪಕ್ಷದ ಚಿಹ್ನೆ ಬೇಕಾಗಿಲ್ಲ ಎಂದು ಬಿಜೆಪಿಯಿಂದ ನಿಲ್ಲಿಸಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ, ದಳದ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ನಾನು ಪ್ರಶ್ನೆ ಕೇಳ ಬಯಸುತ್ತೇನೆ'' ಎಂದು ಕಿಡಿಕಾರಿದರು.
ನಿಮಗೆ ಚೊಂಬು ಕೊಟ್ಟಿದ್ದಾರೆ - ಡಿಕೆಶಿ ಗರಂ:''ಕೆರೆ ಕಮಲದಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಬಂದ ಕೈ ಮೊದಲ ದಿನವೇ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ನಿಮ್ಮೆಲ್ಲರಿಗೂ 200 ಯೂನಿಟ್ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆಯಲ್ಲವೇ? ಬಡ ಕುಟುಂಬದ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ತಲುಪುತ್ತಿದೆ. ರಾಜ್ಯದ ಎಲ್ಲಾ ಮಹಿಳೆಯರು ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಮೂಲಕ 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಇಂತಹ ಯಾವುದಾದರೂ ಒಂದು ಕೆಲಸವನ್ನು ಕುಮಾರಸ್ವಾಮಿ, ಯಡಿಯೂರಪ್ಪ, ದೇವೇಗೌಡರು, ಮಂಜುನಾಥ್ ಅವರು ಮಾಡಿದ್ದಾರಾ? ಇವರೆಲ್ಲರೂ ಸೇರಿ ನಿಮಗೆ ಚೊಂಬು ಕೊಟ್ಟಿದ್ದಾರೆ'' ಎಂದು ಗರಂ ಆದರು.
''ಬಿಜೆಪಿ ಸರ್ಕಾರ ಕೂಡ ಚುನಾವಣೆಗೆ ಮುನ್ನ ಕೆಲವು ಭರವಸೆ ನೀಡಿದ್ದರು. ವಿದೇಶದಲ್ಲಿರುವ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ನಿಮ್ಮಲ್ಲಿ ಯಾರಿಗಾದರೂ 15 ಲಕ್ಷ ಬಂತಾ? ಇನ್ನು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ನಿಮ್ಮಲ್ಲಿ ಯಾವ ರೈತರಿಗಾದರೂ ಆದಾಯ ಡಬಲ್ ಆಯಿತಾ? ಕೋವಿಡ್ನಲ್ಲಿ ನಿಮಗೆ ಏನಾದರೂ ಸಹಾಯ ಮಾಡಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು. ಹಾರೋಹಳ್ಳಿಯ ಜನರಿಗೆ ನಿಮ್ಮ ಊರಲ್ಲಿ ಯಾರಿಗಾದ್ರೂ ಕೆಲಸ ಸಿಕ್ಕಿತಾ? ಹೇಳಿದ ಯಾವ ಭರವಸೆ ಈಡೇರಿಸದೇ ಇದ್ದ ಮೇಲೆ ನೀವು ಯಾವ ನೈತಿಕತೆ ಇಟ್ಟುಕೊಂಡು ಬಂದು ಮತ ಕೇಳುತ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಜನರು ಉಪಕಾರ ಸ್ಮರಣೆ ಮಾಡಬೇಕು:''ದೇವೇಗೌಡರು ಇಲ್ಲಿಗೆ ಬಂದು ಮತ ಕೇಳಿದ್ದಾರೆ ಎಂಬ ಮಾಹಿತಿ ಬಂತು. ಅವರು ನಿಮಗಾಗಿ ಏನಾದರೂ ಕೆಲಸ ಮಾಡಿದ್ದಾರಾ? 25-30 ವರ್ಷಗಳಿಂದ ನನ್ನ ಕ್ಷೇತ್ರ ಎಂದು ಎದೆ ತಟ್ಟಿಕೊಳ್ಳುತ್ತಿದ್ದರಲ್ಲಾ ನಿಮಗೆ ಏನಾದರೂ ಅವರು ಸಹಾಯ ಮಾಡಿದ್ದಾರಾ? ನೀರಾವರಿ, ಕಾವೇರಿ ವಿಚಾರದಲ್ಲಿ ನೆರವಾದ್ರಾ? 300 ಕೋಟಿ ವೆಚ್ಚದಲ್ಲಿ ಈ ಭಾಗದ ಕೆರೆ ತುಂಬಿಸುವಂತೆ ಮಾಡಿದ್ದು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್. ಅರ್ಕಾವತಿ ನೀರು ಸ್ವಚ್ಛಗೊಳಿಸಿ ಈ ಕೆರೆಗಳನ್ನು ತುಂಬಿಸಿದ್ದು ಯಾರು? ಕುಮಾರಸ್ವಾಮಿನಾ? ಅನಿತಕ್ಕನಾ? ರೇವಣ್ಣನಾ? ಡಾ.ಮಂಜುನಾಥ್ ಮಾಡಿದ್ರಾ? ಜನರು ಉಪಕಾರ ಸ್ಮರಣೆ ಮಾಡಬೇಕು'' ಎಂದು ತಿಳಿಸಿದರು.
ನೀವು ಯಾವ ಸೀಮೆ ಮಣ್ಣಿನ ಮಗ?- ಡಿಕೆಶಿ ಗರಂ:''ಈ ಭಾಗದ ಬಡವರಿಗೆ ಯಾರಿಗಾದರೂ ಅವರ ಒಂದು ನಿವೇಶನ ನೀಡಿದ್ದಾರಾ? ಬಗರ್ ಹುಕ್ಕುಂ ಸಾಗುವಳಿ ಜಮೀನು ಸಕ್ರಮ ಮಾಡಿದ್ದಾರಾ? ನಾನು ಅಧ್ಯಕ್ಷನಾಗಿದ್ದಾಗ, ಈ ತಾಲೂಕಿನ 8 ಸಾವಿರ ಎಕರೆ ಜಮೀನನ್ನು ಹಂಚಿದೆ. ಇಲ್ಲಿ ಕೇವಲ ಇಕ್ಬಾಲ್ ಹುಸೇನ್ ಮಾತ್ರ ಶಾಸಕರಲ್ಲ. ಡಿ.ಕೆ ಸುರೇಶ್ ಹಾಗೂ ಶಿವಕುಮಾರ್ ಇಲ್ಲಿನ ಶಾಸಕರಂತೆ ಮುಂದೆ ನಿಂತು ನಿಮ್ಮ ಕೆಲಸ ಮಾಡಿಕೊಡುತ್ತೇವೆ. ಪ್ರಜಾಧ್ವನಿ ಯಾತ್ರೆ ಮಾಡಿ ರಾಜ್ಯದ ಜನರ ಕಷ್ಟವನ್ನು ಅರಿತೆವು. ನಾವು ಮೇಕೆದಾಟು ಯೋಜನೆ ಪಾದಯಾತ್ರೆ ಮಾಡಿದಾಗ ಜೆಡಿಎಸ್ನವರಿಗೂ ಆಹ್ವಾನ ನೀಡಿದ್ದೆವು. ಕುಮಾರಣ್ಣ ಅಥವಾ ದೇವೇಗೌಡರು ಬಂದ್ರಾ? ಹಾಗಾದರೆ ನೀವು ಯಾವ ಸೀಮೆ ಮಣ್ಣಿನ ಮಗ? ನಿಮಗೆ ಅಧಿಕಾರ ಕೊಟ್ಟಾಗ ಏನೂ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದಿಂದ ದೇವೇಗೌಡರು ಪ್ರಧಾನಿಯಾದರು, ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಮೂರು ಬಾರಿ ಅವರ ಕುಟುಂಬಕ್ಕೆ ಅಧಿಕಾರ ಸಿಕ್ಕರೂ ಒಂದೇ ಒಂದು ಸಾಕ್ಷಿ ಗುಡ್ಡೆ ಬಿಡಲಿಲ್ಲ. ಜನತಾ ದಳದಿಂದ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ದಳ ಹಾಗೂ ಬಿಜೆಪಿ ನಾಯಕರು ಈ ಪರಿಸ್ಥಿತಿಯಲ್ಲಿ ಯಾಮಾರಬೇಡಿ. ದಳದ ನಾಯಕರು ತಮ್ಮ ಸ್ವಂತ ಕುಟುಂಬದ ಲಾಭಕ್ಕಾಗಿ ಪಕ್ಷವನ್ನು ಮುಳುಗಿಸಲಿದ್ದಾರೆ. ಪಿಜಿಆರ್ ಸಿಂದ್ಯಾ, ನಾರಾಯಣ ಗೌಡ, ವಿಶ್ವನಾಥ್, ಬಾಲಕೃಷ್ಣ, ಅಶ್ವತ್ಥ, ಬಿ.ಎಲ್. ಶಂಕರ್, ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್, ಪಾಟೀಲ್ ಸೇರಿದಂತೆ ಯಾರೊಬ್ಬರು ಅವರ ಪಕ್ಷದಲ್ಲಿ ಇರಲು ಆಗಲಿಲ್ಲ'' ಎಂದರು.
''ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ 17 ಸಂಸದರಿದ್ದರು. ಆ ಪೈಕಿ 16 ಮಂದಿ ಸಂಸದರು ಈಗ ಬೇರೆ ಬೆರೆ ಪಕ್ಷಗಳಲ್ಲಿ ಇದ್ದಾರೆ. ಬೊಮ್ಮಾಯಿ ಅವರಿಂದ ಹಿಡಿದು ಎಲ್ಲ ನಾಯಕರು ಜೆಡಿಎಸ್ ತೊರೆದಿದ್ದಾರೆ. ಹೀಗಾಗಿ ನೀವು ಆ ಪಕ್ಷದಲ್ಲಿದ್ದು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಡಿ.ಕೆ. ಸುರೇಶ್ ಹಳ್ಳಿ ಹಳ್ಳಿಗೆ ಬಂದು ಗ್ರಾಮ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಕುಮಾರಣ್ಣ, ದೇವೇಗೌಡರು ಯಾವುದಾದರೂ ಮನೆಗೆ ಸ್ಯಾನಿಟೈಸರ್, ಊಟ, ಆಹಾರ, ಔಷಧ ಕೊಟ್ಟಿದ್ದರಾ? ಅವರು ಯಾರ ಕಷ್ಟ ಸುಖ ಕೇಳಿದ್ದಾರಾ? ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಕೋವಿಡ್ಗೆ ಬಲಿಯಾದಾಗ, ಬಿಜೆಪಿ ಸರ್ಕಾರ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ಕಳುಹಿಸದೇ, ಜೆಸಿಬಿಯಲ್ಲಿ ಹೂತುಹಾಕಿದರು. ಆದರೆ, ಸುರೇಶ್ ಅವರು ಈ ಭಾಗದ ಅನಾಥ ಶವಗಳಿಗೆ ಹಿಂದೂ ಸಂಸ್ಕೃತಿಯ ಪ್ರಕಾರ ಅಂತ್ಯಸಂಸ್ಕಾರ ಮಾಡಿದರು. ಇದು ಡಿ.ಕೆ. ಸುರೇಶ್ ಅವರ ಇತಿಹಾಸ'' ಎಂದು ತಿಳಿಸಿದರು.
''ಯಾವುದೋ ಕೆಲಸ ಮಾಡದ ಕಾರಣ ಕುಮಾರಸ್ವಾಮಿ ಈ ಜನರಿಗೆ ಹೆದರಿ ಅವರ ಬಾಮೈದನನ್ನು ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸಿದ್ದಾರೆ. ಕುಮಾರಣ್ಣ, ಹಾಸನದಿಂದ ಬಂದ ನಿಮ್ಮನ್ನು ರಾಜಕೀಯವಾಗಿ ಜೀವ ತುಂಬಿದ ಜನರನ್ನು ಬಿಟ್ಟು ಈಗ ಮಂಡ್ಯಕ್ಕೆ ಹೋಗಿ ಸ್ಪರ್ಧೆ ಮಾಡಿದ್ದಾರೆ. ಈ ಜನ ನಿಮ್ಮನ್ನು ಸಂಸದ, ಶಾಸಕ, ಮುಖ್ಯಮಂತ್ರಿಯಾನ್ನಾಗಿ ಮಾಡಿದ್ದಾರೆ, ನಿಮ್ಮ ತಂದೆಯನ್ನು ಮುಖ್ಯಮಂತ್ರಿ ಮಾಡಿದ್ದಾರೆ, ನಿಮ್ಮ ಧರ್ಮಪತ್ನಿಯನ್ನು ಶಾಸಕಿಯನ್ನಾಗಿ ಮಾಡಿದರು. ಅಂತಹ ಜನಗಳನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ನನಗೆ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕಣ್ಣುಗಳು ಎಂದ ಕುಮಾರಣ್ಣ, ನಿಮ್ಮ ಕಣ್ಣುಗಳು ಏನಾಯ್ತು? ನಾನು ಮಂಡ್ಯ, ಹಾಸನ, ಕೋಲಾರ ಹಾಗೂ ಇಲ್ಲಿ ಪ್ರಚಾರ ಮಾಡಿದ್ದೇನೆ. ಜನ ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವುದಿಲ್ಲ. ಕುಮಾರಣ್ಣ ನಿಮ್ಮ ಮನೆಯಿಂದ ಸ್ಪರ್ಧಿಸಿರುವ ಮೂರು ಜನರ ಸೋಲು ಖಚಿತ'' ಎಂದು ಭವಿಷ್ಯ ನುಡಿದರು.
ಸೋಲಿನ ಭೀತಿಯಿಂದ ಐಟಿ ದಾಳಿ:''ಸೋಲಿನ ಭೀತಿಯಿಂದ ಸುರೇಶ್ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಮಾಡಿಸಿದ್ದಾರೆ. ನನ್ನನ್ನು ಜೈಲಿಗೆ ಹಾಕಿದರು. ನಿಮಗೆ ಯಾರಿಗಾದರೂ ನಾನು ತೊಂದರೆ ಮಾಡಿದ್ದೇನಾ? ಮೋಸ ಮಾಡಿದ್ದೇನೆಯಾ? ನನ್ನನ್ನು ಜೈಲಿಗೆ ಹಾಕಿ ಇವರೆಲ್ಲಾ ಏನೆಲ್ಲಾ ಮಾತನಾಡಿದರು. ಮಾತೆತ್ತಿದರೆ ಕುಮಾರಣ್ಣ ಕಲ್ಲು ಹೊಡೆದೆ ಎನ್ನುತ್ತಾರೆ. ನನ್ನ ಜಮೀನಿನಲ್ಲಿ ನಾನು ಕಲ್ಲು ಹೊಡೆದರೆ ನಿನಗೇನಯ್ಯಾ ತೊಂದರೆ? ನಾನು ಯಾರ ಬಳಿಯಾದರೂ ಲಂಚ ಪಡೆದಿದ್ದೀನಾ? ಸೊಸೈಟಿ ನಿರ್ದೇಶಕ ಸ್ಥಾನದಿಂದ 8 ಬಾರಿ ಶಾಸಕನಾಗಿ ಆಕೆಯಾಗಿದ್ದೇನೆ. ಎಂದಾದರೂ ನನ್ನ ಮೇಲೆ ಆಪಾದನೆ ಬಂದಿದೆಯಾ? ನಾನು ಜನರ ಸೇವಕನಾಗಿ ದುಡಿಯುತ್ತಿದ್ದೇನೆ'' ಎಂದರು.
ಇದನ್ನೂ ಓದಿ:ದೇಶ, ರಾಜ್ಯದ ಸುರಕ್ಷತೆಗೆ ಕಾಂಗ್ರೆಸ್ ಬೆದರಿಕೆ: ಕೈ ವಿರುದ್ಧ ಅಮಿತ್ ಶಾ ವಾಗ್ದಾಳಿ - Amit Shah Roadshow