ಕರ್ನಾಟಕ

karnataka

ETV Bharat / state

ಜೆಡಿಎಸ್ ಚನ್ನಪಟ್ಟಣ ಸೀಟು ಬಿಟ್ಟು ಕೊಡ್ತಾರಂತೆ, ಇಷ್ಟು ವೀಕ್ ಆಗ್ತಾರೆ ಅಂತ ತಿಳಿದುಕೊಂಡಿರಲಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಚನ್ನಪಟ್ಟಣ ಉಪಚುನಾವಣೆ ಕುರಿತು ಮಾತನಾಡಿದ್ದಾರೆ. ಜೆಡಿಎಸ್​ ಚನ್ನಪಟ್ಟಣ ಸೀಟು ಬಿಟ್ಟು ಕೊಡ್ತಾರಂತೆ, ಅವರು ಇಷ್ಟು ವೀಕ್​ ಆಗಿದ್ದಾರೆ ಎಂದು ಡಿಕೆಶಿ ಕಾಲೆಳೆದಿದ್ದಾರೆ.

By ETV Bharat Karnataka Team

Published : 5 hours ago

Dcm-d-k-shivakumar
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (ETV Bharat)

ಬೆಂಗಳೂರು : ಚನ್ನಪಟ್ಟಣ ಸ್ಪರ್ಧೆ ವಿಚಾರವಾಗಿ ವಿಪಕ್ಷದವರು ಇಷ್ಟು ವೀಕ್ ಆಗ್ತಾರೆ ಅಂತ ನಾನು ತಿಳಿದುಕೊಂಡಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಸೂಚ್ಯವಾಗಿ ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಖಾಸಗಿ ಹೋಟೆಲ್​ನಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ನಾನೇ ಅಭ್ಯರ್ಥಿ ಅಂತ ಹೇಳಿದ್ದೇನೆ. ಯಾರೇ ನಿಂತರೂ ನೋಡುವುದಕ್ಕೆ ಹೋಗಬೇಡಿ ಎಂದು ಹೇಳಿದ್ದೇನೆ. ವಿಪಕ್ಷದವರು ಹೆದರಿಕೊಂಡು ಶರಾಣುಗುತ್ತಿದ್ದಾರೆ. ಅಷ್ಟು ವೀಕ್ ಆಗ್ತಾರೆ ಅಂತ ನಾನು ತಿಳಿದುಕೊಂಡಿರಲಿಲ್ಲ. ನೋಡೋಣ. ರಾತ್ರಿಯೆಲ್ಲಾ ಸಭೆಗಳು ನಡೆದಿವೆ. ಜೆಡಿಎಸ್​ನವರು ಸೀಟ್ ಬಿಟ್ಟು ಕೊಡ್ತಾರೆ ಅಂತ ಯಾರೋ ಕರೆ ಮಾಡಿದ್ದರು ನನಗೆ. ಇರಲಿ, ಏನು ಬೇಕಾದ್ದು ಮಾಡಲಿ ಎಂದರು.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿದರು (ETV Bharat)

ಮೈತ್ರಿಯಿಂದ ಅಚ್ಚರಿ ಅಭ್ಯರ್ಥಿ ಬರಬಹುದಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ನನಗೆ ಗೊತ್ತಿಲ್ಲ. ಆ ಬಗ್ಗೆ ಯೋಚನೆ ಮಾಡಲು ಹೋಗಿಲ್ಲ. ನಮ್ಮ ಕಾರ್ಯಕರ್ತರ ಜೊತೆ ಮಾತನಾಡಿದ್ದೇನೆ. ಅವರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಅವರು ಏನು ಹೇಳುತ್ತಾರೋ ಕೇಳ್ತಾ ಇದ್ದೇನೆ. ರಾಜಕಾರಣದಲ್ಲಿ ಯಾರು ಬೇಕಾದರೂ ಗೆಲ್ಲಬಹುದು. ಗಾಬರಿ ಆಗಬೇಡಿ. ಪಿಎಂ ಸೀಟನ್ನೇ ರಾಮನಗರದಲ್ಲಿ ನಾವು ಗೆದ್ದಿದ್ದೇವೆ. ಕಾರ್ಯಕರ್ತರನ್ನು ನಿಲ್ಲಿಸಿದರೂ ಅದಕ್ಕೆ ನೀವು ತಯಾರಾಗಿರಬೇಕು ಅಂತ ಹೇಳಿದ್ದೇನೆ ಎಂದರು.

ನಾನು ಚನ್ನಪಟ್ಟಣಕ್ಕೆ ಹೋಗಲೇ ಬೇಕಲ್ಲ. ನಮ್ಮ ಜನ, ಅವರ ಬಗ್ಗೆ ವಿಶ್ವಾಸ ಇದೆ. ಸೇವೆ ಮಾಡಲು ಅಲ್ಲಿಗೆ ಹೋಗುತ್ತಿದ್ದೇನೆ. ವಿಪಕ್ಷ ಗಾಬರಿ ಬೀಳ್ತಾರೆ ಅಂತಲ್ಲ. ಆದರೆ ಇಷ್ಟು ವೀಕ್ ಅಂತ ತಿಳಿದುಕೊಂಡಿರಲಿಲ್ಲ. ಶಸ್ತ್ರತ್ಯಾಗ ಮಾಡಿದ್ದಾರಾ ಎಂಬುದನ್ನು ನೀವು ವಿಪಕ್ಷವನ್ನು ಕೇಳಬೇಕು ಎಂದು ಟಾಂಗ್ ನೀಡಿದರು.

ಡಿ.ಕೆ ಸುರೇಶ್ ಪರ ಸಭೆಯಲ್ಲಿ ಒಲವು ವ್ಯಕ್ತವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಅಭಿಪ್ರಾಯ ಹೇಳ್ತಾರೆ. ಯಾರದ್ದೂ ಮನಸ್ಸನ್ನ ಒಲಿಸುವ ಅಗತ್ಯವಿಲ್ಲ. ಇಂತವರು ಅಭ್ಯರ್ಥಿ ಅಂತ ಡಿ. ಕೆ ಸುರೇಶ್ ಹೇಳಲಿ. ನಾನೇ ಹೇಳಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಡಿ. ಕೆ ಸುರೇಶ್​ರದ್ದು ಏನೋ ಲೆಕ್ಕಾಚಾರ ಇರುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಭೆ ನಡೆಸಿದ ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಸಭೆಯಲ್ಲಿ ಚನ್ನಪಟ್ಟಣದಲ್ಲಿ ಡಿ. ಕೆ‌ ಸುರೇಶ್ ಸ್ಪರ್ಧೆಗೆ ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ. ಡಿ. ಕೆ ಸುರೇಶ್ ಅಭ್ಯರ್ಥಿಯಾಗಬೇಕು. ಅವರು ನಿಂತರೆ ಗೆಲುವು ಸುಗಮವಾಗಲಿದೆ. ಹಾಗಾಗಿ ಡಿ. ಕೆ ಸುರೇಶ್ ಅವರೇ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ : ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದರು.

ರವೀಂದ್ರ ಕಲಾಕ್ಷೇತ್ರ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು. ಚನ್ನಪಟ್ಟಣ ನಾಯಕರ ಸಭೆ ಬಗ್ಗೆ ಕೇಳಿದಾಗ, ನಾನು ಉಪಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ಈಗಾಗಲೇ ಶಿಗ್ಗಾಂವಿ ನಾಯಕರ ಜತೆ ಚರ್ಚೆ ಮಾಡಿದ್ದು, ಇಂದು ಚನ್ನಪಟ್ಟಣ ತಾಲೂಕಿನ ನಾಯಕರ ಜತೆ ಸಭೆ ಮಾಡುತ್ತಿದ್ದೇನೆ. ಆ ಮೂಲಕ ಅವರ ಅಭಿಪ್ರಾಯ ಸಂಗ್ರಹಿಸಿ, ಅವರು ಯಾರ ಹೆಸರು ಸೂಚಿಸುತ್ತಾರೆ ಎಂದು ಮಾಹಿತಿ ಪಡೆಯುತ್ತೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವುದು ನನ್ನ ಕರ್ತವ್ಯ. ನಾನು ಅದನ್ನು ಮಾಡುತ್ತಿದ್ದೇನೆ ಎಂದರು.

ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಾವು ಎಲ್ಲಾ ನಾಯಕರು ಸೇರಿ ಒಮ್ಮತದ ಅಭ್ಯರ್ಥಿ ಹಾಕಲು ತೀರ್ಮಾನಿಸಿದ್ದೇವೆ. ನಮ್ಮ ಪಕ್ಷದ ನೆಲೆ ಉಳಿಸಿಕೊಳ್ಳಲು ಅಗತ್ಯ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಕ್ಷೇತ್ರದಲ್ಲಿ ಯಾರನ್ನ ನಿಲ್ಲಿಸಿದರೆ ಗೆಲ್ಲಬಹುದೆಂಬ ಮಾಹಿತಿ‌ ಪಡೆದುಕೊಂಡರು. ಮಾಜಿ ಸಂಸದ ಡಿ. ಕೆ ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್ ರವಿ, ಮಾಜಿ ಶಾಸಕರಾದ ರಾಜು, ಎಂ ಸಿ ಅಶ್ವಥ್, ಮುಖಂಡರಾದ ದುಂತೂರು ವಿಶ್ವನಾಥ್, ಹನುಮಂತರಾಯಪ್ಪ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ :ನಿಖಿಲ್ ಅಥವಾ ಸಿಪಿವೈ ಯಾರೇ ಆಗಲಿ, 2 ಪಕ್ಷಗಳ ನಾಯಕರ ತೀರ್ಮಾನವೇ ಅಂತಿಮ: ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details