ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರವೇ ನಿಮ್ಮ ತಾಯಿ - ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ: ಮೈತ್ರಿ ನಾಯಕರ ವಿರುದ್ಧ ಡಿಕೆಶಿ ಟೀಕೆ - D k shivakumar - D K SHIVAKUMAR

ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ ವಿಚಾರಗಳನ್ನು ಅನಾವರಣಗೊಳಿಸುವುದರ ಜತೆಗೆ ನಮ್ಮ ಪಕ್ಷ ಸಂಘಟನೆಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್ (ETV Bharat)

By ETV Bharat Karnataka Team

Published : Aug 3, 2024, 10:44 PM IST

ರಾಮನಗರ:ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ ವಿಚಾರಗಳನ್ನು ಅನಾವರಣಗೊಳಿಸುವುದರ ಜತೆಗೆ ನಮ್ಮ ಪಕ್ಷ ಸಂಘಟನೆಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜನ ನನ್ನ ನಾಯಕತ್ವಕ್ಕೆ 135 ಸೀಟು, ಕುಮಾರಸ್ವಾಮಿ ನಾಯಕತ್ವಕ್ಕೆ 19 ಸೀಟು ಕೊಟ್ಟಿದ್ದಾರೆ: ನಾನು ಶುಕ್ರವಾರದಂದು ಬಿಡದಿಯಲ್ಲಿ ಬೇಕಂತಲೇ ಕುಮಾರಸ್ವಾಮಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ನನ್ನನ್ನು ಜೈಲಿಗೆ ಹಾಕಲು ಮಿಲಿಟರಿ ಬಂದು ಕರೆದುಕೊಂಡು ಹೋಗಲಿದೆ ಎಂದು ಕುಮಾರಸ್ವಾಮಿ ಅವರು ಹಿಂದೆ ಹೇಳಿಕೆ ನೀಡಿದ್ದರು. ನಾನು ಕೇಂದ್ರ ಮಂತ್ರಿಯಾಗಿದ್ದು, ನಿಮ್ಮನ್ನು ತಿಹಾರ್ ಜೈಲಿಗೆ ಕಳಿಸುತ್ತೇನೆ ಎಂಬ ಅರ್ಥದಲ್ಲಿ ಆ ಮಾತು ಹೇಳಿದ್ದರು ಎಂದರು.

ಮಿಸ್ಟರ್ ಕುಮಾರಸ್ವಾಮಿ, ನಾನು ತಿಹಾರ್ ಜೈಲನ್ನೂ ನೋಡಿ ಆಗಿದೆ, ನೀವು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಾಕಿರುವ ಕೇಸ್​ಗಳನ್ನು ನೋಡಿ ಆಯಿತು. ಇದಾದ ನಂತರವೇ ಜನ ಈ ಡಿ.ಕೆ. ಶಿವಕುಮಾರ್ ನಾಯಕತ್ವಕ್ಕೆ 135 ಸೀಟುಗಳನ್ನು ಕೊಟ್ಟು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ನಿನ್ನ ನಾಯಕತ್ವಕ್ಕೆ ಜನ ಬರೀ 19 ಸೀಟು ಕೊಟ್ಟಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಪೆನ್​ಡ್ರೈವ್ ಪ್ರಕರಣದಲ್ಲಿ ಬಿಜೆಪಿ ನಾಯಕನ ಕೈವಾಡ: ಕುಮಾರಸ್ವಾಮಿ ಅವರು ನಾನು ಪೆನ್ ಡ್ರೈವ್ ಬಿಡುಗಡೆ ಮಾಡಿದೆ ಎಂದು ಸುಳ್ಳು ಆರೋಪ ಮಾದಿದ್ದರು. ಈ ಡಿ. ಕೆ. ಶಿವಕುಮಾರ್ ಅಂತಹ ನೀಚ ರಾಜಕಾರಣ ಮಾಡುವುದಿಲ್ಲ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಈಗ ಕುಮಾರಸ್ವಾಮಿ ಅವರೇ ಈ ಪೆನ್ ಡ್ರೈವ್ ಗಳನ್ನು ಬಿಟ್ಟಿರುವುದು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಎಂದು ಹೇಳಿದ್ದಾರೆ. ಪ್ರೀತಂ ಗೌಡನನ್ನು ವೇದಿಕೆಯಲ್ಲಿಟ್ಟುಕೊಂಡು ನನ್ನನ್ನು ಪಾದಯಾತ್ರೆ, ಸಭೆಗೆ ಕರೆಯುತ್ತಾರೆ. ಹೀಗಾಗಿ ನಾನು ಭಾಗವಹಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಹೋಗಿದ್ದಾರೆ. ಅವರ ಮಾತಿಗೂ ಕೃತಿಗೂ ಸಂಬಂಧವೇ ಇರುವುದಿಲ್ಲ ಎಂದು ಡಿಕೆಶಿ ಹೇಳಿದರು.

ಪೆನ್ ಡ್ರೈವ್ ಪ್ರಕರಣ ಹೊರ ಬಂದಾಗ, ನನಗೂ ಪ್ರಜ್ವಲ್ ರೇವಣ್ಣಗೂ ಸಂಬಂಧವಿಲ್ಲ, ನನಗೂ ರೇವಣ್ಣ ಕುಟುಂಬಕ್ಕೂ ಸಂಬಂಧವಿಲ್ಲ. ಅವರ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ ಎಂದು ಹೇಳಿದ್ದರು. ಈಗ ನಿಮ್ಮ ಮಾತು ಎಲ್ಲಿ ಹೋಯ್ತು?. ನೀವು ಒಂದಾಗಿಯೇ ಇರಿ. ನಿಮ್ಮನ್ನು ಬೇರೆ ಮಾಡುವ ಉದ್ದೇಶ ನನ್ನದಲ್ಲ. ಆದರೆ ನಿಮ್ಮ ಮಾತು ಕಾಲಕ್ಕೆ ತಕ್ಕಂತೆ ಬದಲಾಗದಿರಲಿ ಎಂದು ಡಿ ಕೆ ಶಿಚಕುಮಾರ್ ಟೀಕಿಸಿದರು.

ನಾನು ಬಿಜೆಪಿ ನಾಯಕರನ್ನು ಕೆಲವು ಪ್ರಶ್ನೆ ಮಾಡಲು ಬಯಸುತ್ತೇನೆ. ಪೆನ್ ಡ್ರೈವ್ ಅನ್ನು ಪ್ರೀತಂಗೌಡ ಹಂಚಿದ್ದಾನೆ ಎಂದು ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ನಾಯಕರೇಕೆ ಚರ್ಚೆ ಮಾಡುತ್ತಿಲ್ಲ. ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುವ ದೇಶದ ಪ್ರಧಾನಮಂತ್ರಿಗಳು ಈ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಬಿಜೆಪಿ ನಾಯಕರು ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ? ಈ ಬಗ್ಗೆ ಚರ್ಚೆ ಮಾಡಿ ಎಂದು ಆಗ್ರಹಿಸುತ್ತೇನೆ ಎಂದರು.

ಸಿದ್ದರಾಮಯ್ಯನವರ ಪತ್ನಿ ಅವರಿಗೆ ಮುಡಾ ನಿವೇಶನ ಕೊಟ್ಟಾಗ ಸಿಎಂ ಆಗಿದ್ದವರು ಯಾರು?: ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಸಹೋದರ ಅರಿಶಿನ ಕುಂಕುಮಕ್ಕೆ ದಾನವಾಗಿ ನೀಡಿದ ಜಮೀನಿನ ವಿಚಾರದಲ್ಲಿ ಅಕ್ರಮ ನಡೆದಿದೆಯಾ? ಅವರು ಸರ್ಕಾರಿ ಜಮೀನು ಕಬಳಿಸಿದ್ದಾರಾ? ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿಕೊಂಡಿದ್ದಾರಾ? ಅವರ ಜಮೀನನ್ನು ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕಾರಣಕ್ಕೆ ಪರಿಹಾರವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಈ ರಾಜ್ಯದಲ್ಲಿ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ವಿರುದ್ಧ ಯಾರು ಎಷ್ಟಾದರೂ ಟೀಕೆ ಮಾಡಲಿ, ನನ್ನ ಪ್ರಶ್ನೆಗೆ ಉತ್ತರ ನೀಡಲಿ. ಈ ಜಿಲ್ಲೆಯ ಜನ ನನಗೆ, ಇಕ್ಬಾಲ್ ಹುಸೇನ್, ಬಾಲಕೃಷ್ಣ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟದ ವಿಚಾರ ನಾಳೆ ಮಾತನಾಡುತ್ತೇನೆ. ಬಿಜೆಪಿ ಪಾದಯಾತ್ರೆ ಸಾಗುತ್ತಿರುವ ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರುವರೆಗೂ ಕಾಂಗ್ರೆಸ್ ಶಾಸಕರೇ ಇದ್ದಾರೆ. ನಿನ್ನೆವರೆಗೂ ಪಾದಯಾತ್ರೆ ವಿಚಾರದಲ್ಲಿ ಕೇವಲ ಬಿಜೆಪಿ ಬಾವುಟವಿತ್ತು. ನಾನು ಹಾಗೂ ಪರಮೇಶ್ವರ್ ಅವರು ಪ್ರಶ್ನೆ ಮಾಡಿದ ತಕ್ಷಣ ರಾತ್ರೋರಾತ್ರಿ ಪಾದಯಾತ್ರೆಗೆ ಜೆಡಿಎಸ್ ಬಾವುಟ ಬಂದಿದೆ ಎಂದು ಡಿಸಿಎಂ ತಿಳಿಸಿದರು.

ಇದನ್ನೂ ಓದಿ:ಮುಡಾ ಹಗರಣ ವಿರುದ್ಧ ಮೈತ್ರಿ ಪಕ್ಷಗಳ ಪಾದಯಾತ್ರೆ: ಈಟಿವಿ ಭಾರತ ಜೊತೆ ದೋಸ್ತಿ ನಾಯಕರು ಹೇಳಿದ್ದೇನು? - Mysuru Chalo Padayatra

ABOUT THE AUTHOR

...view details