ಮೈಸೂರು: ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು.
"ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕುಡಿಯುವ ನೀರಿಗೆ ಯಾವುದೇ ಕಲುಷಿತ ನೀರು ಸೇರ್ಪಡೆಯಾಗದಂತೆ ಎಚ್ಚರ ವಹಿಸಿ. ನೀರಿನ ಸರಬರಾಜು ವ್ಯವಸ್ಥೆಯಲ್ಲಿರುವ ಎಲ್ಲಾ ನೀರು ಶೇಖರಣಾ ಘಟಕಗಳನ್ನು ಸ್ವಚ್ಛಗೊಳಿಸಿ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಲು ಕ್ರಮವಹಿಸಿ. ನೀರಿನ ಮೂಲಗಳಾದ ಕೊಳವೆ ಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ಅಥವಾ ಚರಂಡಿ ನೀರು ನಿಲ್ಲದಂತೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕೈಗೊಂಡು ನೀರಿನ ಮೂಲದ ಸುತ್ತ ಕಾಂಕ್ರೀಟ್ ಕಟ್ಟೆ ಕಟ್ಟಲು ಅಗತ್ಯ ಕ್ರಮ ವಹಿಸಬೇಕು" ಎಂದು ಹೇಳಿದರು.
"ಪರೀಕ್ಷೆ ನಡೆಸದೆ ಕುಡಿಯುವ ನೀರು ಸರಬರಾಜು ಮಾಡಿ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾದಲ್ಲಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಗ್ರಾಮಗಳಲ್ಲಿ ಸ್ವಚ್ಛತೆ, ಚರಂಡಿಗಳ ನಿರ್ವಹಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಹೋಟೆಲ್, ರಸ್ತೆಯ ಬದಿಯ ಫಾಸ್ಟ್‌ಫುಡ್ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು" ಎಂದು ಎಚ್ಚರಿಕೆ ನೀಡಿದರು.
"ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್‍ಗುನ್ಯಾ ವ್ಯಾಪಿಸದಂತೆ ತೀವ್ರ ನಿಗಾವಹಿಸುವಂತೆ ಅಧಿಕಾರಿಗಳು ಮುಂದಾಗಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ನಿರ್ವಹಿಸಬೇಕು. ನೀರಿನ ವ್ಯವಸ್ಥೆಯಡಿ ಬರುವ ಎಲ್ಲಾ ಪೈಪ್ಲೈನ್ಗಳನ್ನು ಪ್ರತಿದಿನವೂ ಕಣ್ಣುಗಾವಲು ನಡೆಸಿ. ಪೈಪ್‌ಲೈನ್ ಹಾನಿಯಾಗಿದ್ದರೆ ಕಲುಷಿತ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಗಮನವಹಿಸಿ ದುರಸ್ಥಿ ಕಾರ್ಯ ನಡೆಯಬೇಕು" ಎಂದರು.