ಬೆಂಗಳೂರು:ಹೊಲ, ಗದ್ದೆ ಮತ್ತು ತೋಟಗಳಲ್ಲಿ ದುಡಿಯುವ ರೈತ ಸದಾ ಮನೆಯ ಹೊರಗೆ ಇರುತ್ತಾನೆ. ಇದರಿಂದ ಮಳೆಗಾಲದಲ್ಲಿ ಸಿಡಿಲ ಹೊಡೆತಕ್ಕೆ ಹೆಚ್ಚಿನ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸಿಡಿಲ ಹೊಡೆಯುವ 15 ನಿಮಿಷಕ್ಕೂ ಮುನ್ನವೇ ರೈತರಿಗ ಮುನ್ಸೂಚನೆ ಕಳಿಸುವ ಮೊಬೈಲ್ ಆಪ್ ಅನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದು, ಆಪ್ ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳ-2024 ನಡೆಯುತ್ತಿದ್ದು, ಕೃಷಿಮೇಳದಲ್ಲಿ ರೈತರಿಗೆ ಮಾಹಿತಿ ನೀಡಲು ಸ್ಟಾಲ್ಗಳನ್ನು ಅಳವಡಿಸಲಾಗಿದೆ. ಕೃಷಿ ಹವಾಮಾನ ಇಲಾಖೆ ಸ್ಟಾಲ್ನಲ್ಲಿ ರೈತರಿಗೆ ಹವಮಾನದ ಬಗ್ಗೆ ಮಾಹಿತಿ ನೀಡುವ ದಾಮಿನಿ ಮತ್ತು ಮೇಘದೂತ್ ಎರಡು ಮೊಬೈಲ್ ಆಪ್ಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ವಿಜ್ಞಾನಿ ಡಾ. ಮಂಜುನಾಥ್ ಎಂ. ಹೆಚ್ ಅವರು ರೈತರಿಗೆ ಯಾವ ರೀತಿಯಲ್ಲಿ ಮೊಬೈಲ್ ಆ್ಯಪ್ಗಳು ನೆರವಾಗುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದಾರೆ.
ಡಾ. ಮಂಜುನಾಥ್ ಎಂ. ಹೆಚ್ (ETV Bharat) ಮೇಘದೂತ ಕೃಷಿ ನಿಂತಿರುವುದು ಮಳೆ, ಗಾಳಿ, ಬೆಳಕಿನ ಆಧಾರದ ಮೇಲೆ. ಬೆಳೆಗಳಿಗೆ ಸೂಕ್ತ ಸಮಯದಲ್ಲಿ ಬೇಕಾದ ಗಾಳಿ, ತೇವಾಂಶ ಮತ್ತು ಸೂರ್ಯ ಬೆಳಕು ಮತ್ತು ಶಾಖ ಸಿಕ್ಕಾಗ ಉತ್ತಮ ಫಸಲು ನೀಡುತ್ತದೆ. ಒಂದು ವೇಳೆ ಏರುಪೇರಾದಲ್ಲಿ ಬೆಳೆಯೇ ನಾಶವಾಗುತ್ತದೆ. ಹವಾಮಾನದಲ್ಲಿನ ವೈಪರಿತ್ಯಗಳಾದ ಮಳೆ, ಬಿಸಿಗಾಳಿ, ಆಲಿಕಲ್ಲು, ಮೋಡ ಇದರ ಬಗ್ಗೆ ಮುನ್ಸೂಚನೆ ಸಿಕ್ಕಲ್ಲಿ ರೈತ ತನ್ನ ಬೆಳೆಗಳನ್ನು ಕಾಪಾಡಿಕೊಂಡು ಆಗುವ ನಷ್ಟದಿಂದ ಪಾರಾಗುತ್ತಾನೆ. ರೈತರು ತಮ್ಮ ಮೊಬೈಲ್ನಲ್ಲಿ ಮೇಘದೂತ ಆ್ಯಪ್ ಅಳವಡಿಸಿಕೊಂಡರೆ. ಮುಂದಿನ 5 ದಿನಗಳ ವಾತಾವರಣದ ಬಗ್ಗೆ ಮಾಹಿತಿಯನ್ನು ಮೊಬೈಲ್ ಮೂಲಕವೇ ಪಡೆಯುತ್ತಾನೆ.
ವಾರದ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಆ್ಯಪ್ನಲ್ಲಿ ಮಾಹಿತಿಯನ್ನು ಆಪ್ಲೋಡ್ ಮಾಡಲಾಗುತ್ತದೆ. ತಾಲೂಕು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ, ಬಿಸಿಲಿನ ಪ್ರಮಾಣ, ಗಾಳಿ ದಿಕ್ಕು, ಗಾಳಿ ವೇಗ ಸೇರಿದಂತೆ ಹವಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಇದರ ಜೊತೆಯಲ್ಲಿ ಹವಮಾನ ಆಧಾರಿತ ಕೃಷಿ ಸಲಹೆಗಳನ್ನು ನೀಡುತ್ತದೆ. ದಾಮಿನಿ ಆಪ್ ಸಿಡಿಲಿನ ಅನಾಹುತ ತಪ್ಪಿಸಲು ಭಾರತೀಯ ವಿಜ್ಞಾನಿಗಳು ದಾಮಿನಿ ಆಪ್ ಅಭಿವೃದ್ಧಿ ಮಾಡಿದ್ದಾರೆ. ರೈತರು ಈ ಆ್ಯಪ್ ಅನ್ನು ಮೊಬೈಲ್ನಲ್ಲಿ ಅಳವಡಿಸಿಕೊಂಡರೆ ರೈತ ವಾಸಿಸುವ 20 ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಸಿಡಿಲು ಬಡಿಯುವ 15 ನಿಮಿಷ ಮುನ್ನವೇ ರೈತನಿಗೆ ಅಲರ್ಟ್ ಮೆಸ್ಸೇಜ್ ಅನ್ನು ಮೊಬೈಲ್ಗೆ ರವಾನಿಸುತ್ತದೆ. ಸಿಡಿಲ ಬಗ್ಗೆ ನಿಖರವಾದ ಮಾಹಿತಿಯನ್ನು ದಾಮಿನಿ ಆ್ಯಪ್ ನೀಡುವುದರಿಂದ ರೈತರ ಸಾವು ಮತ್ತು ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
ಇದನ್ನೂ ಓದಿ:ಮಧ್ಯವರ್ತಿಗಳ ಕಮಿಷನ್, ಚೌಕಾಶಿಯಿಂದ ರೈತರಿಗೆ ಮುಕ್ತಿ: ಬಿತ್ತನೆ ಬೀಜಗಳು ಆನ್ಲೈನ್ ಮೂಲಕ ಮನೆ ಬಾಗಿಲಿಗೆ!