ಕರ್ನಾಟಕ

karnataka

ETV Bharat / state

ಬೇಕರಿ, ಬಟ್ಟೆ ಅಂಗಡಿ, ಪೊಲೀಸ್ ಕಮಿಷನರ್ ಎಲ್ಲರಿಗೂ ಸೈಬರ್ ವಂಚಕರ ಉಪಟಳ! - CYBER ​​FRAUD

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಸೈಬರ್​ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ಸಣ್ಣಪುಟ್ಟ ಅಂಗಡಿ ಮಾಲೀಕರಿಂದ ಹಿಡಿದು ನಗರ ಪೊಲೀಸ್​ ಕಮಿಷನರ್ ಅವರನ್ನೂ ಅವರು ಬಿಟ್ಟಿಲ್ಲ.

ಕಡಬದಲ್ಲಿ ಹೆಚ್ಚಿದ  ಸೈಬರ್​ ವಂಚನೆ.
ಸೈಬರ್ ವಂಚನೆ (ಸಾಂದರ್ಭಿಕ ಚಿತ್ರ) (ETV Bharat)

By ETV Bharat Karnataka Team

Published : Oct 27, 2024, 7:11 AM IST

ಕಡಬ(ದಕ್ಷಿಣ ಕನ್ನಡ): ಸಣ್ಣಪುಟ್ಟ ಅಂಗಡಿ ಮಾಲೀಕರಿಂದ ಹಿಡಿದು ಪೊಲೀಸ್ ಕಮಿಷನರ್​ವರೆಗೂ ಆನ್​ಲೈನ್​​ ಹ್ಯಾಕರ್‌ಗಳು ಉಪಟಳ ನೀಡುತ್ತಿದ್ದಾರೆ. ಈ ಹಿಂದೆ ಮೊಬೈಲ್ ಒಟಿಪಿ ವಂಚನೆ, ಬ್ಯಾಂಕ್ ಖಾತೆಗೆ ಕನ್ನ ಹಾಕುವುದು, ಗೋಲ್ಡ್ ಕಾಯಿನ್ ವಂಚನೆ, ಫೇಸ್‌ಬುಕ್ ಹ್ಯಾಕ್ ಮಾಡಿ ಹಣದ ಬೇಡಿಕೆ, ಮಹಿಳೆಯರ ಮೂಲಕ ವಿಡಿಯೋ ಕಾಲ್ ಮಾಡಿ ಹಣ ಬೇಡುತ್ತಿದ್ದ ವಂಚಕರು ಈಗೀಗ ಹೊಸ ರೀತಿಯ ಮೋಸದಾಟಕ್ಕೆ ಮುಂದಾಗಿದ್ದಾರೆ.

ಸಣ್ಣ ಬೇಕರಿಗಳು, ಬಟ್ಟೆ ಅಂಗಡಿಗಳಿಗೆ ಕರೆಮಾಡುವ ಇವರು ತಮ್ಮ ವಿನೂತನ ತಂತ್ರಗಾರಿಕೆಯ ಮೂಲಕ ಹಣ ಎಗರಿಸುತ್ತಿದ್ದಾರೆ. ಇತ್ತೀಚೆಗೆ ಕಡಬದ ಬೇಕರಿಯೊಂದಕ್ಕೆ ಕರೆಮಾಡಿ, ಮೂರು ಕೆ.ಜಿ. ಲಾಡು ಬೇಕು, ಹಣ ಎಷ್ಟಾಗುತ್ತದೆ? ಎಂದು ಕೇಳಿದ್ದಾರೆ. ಬೇಕರಿಯವರು 900 ರೂಪಾಯಿ ಆಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಜನ ಈಗ ಬರುತ್ತಾರೆ, ಪಾರ್ಸಲ್ ಕಟ್ಟಿಡಿ. ನಾನು ನಿಮಗೆ ಈಗಲೇ ಹಣ ಹಾಕುತ್ತೇನೆ ಎಂದು ಹೇಳಿದ ಅಪರಿಚಿತ, ನಂತರ ನಾನು ನಿಮಗೆ ತಪ್ಪಿ 900 ರೂಪಾಯಿ ಬದಲು ಒಂದು ಸೊನ್ನೆ ಹೆಚ್ಚು ಹಾಕಿ 9,000 ರೂಪಾಯಿ ಹಾಕಿದ್ದೇನೆ. ದಯಮಾಡಿ ಒಂದು ಸಾವಿರ ರೂಪಾಯಿ ಇಟ್ಟುಕೊಂಡು 8,000 ರೂಪಾಯಿ ವಾಪಸ್ ಕಳುಹಿಸಿ ಎಂದು ಹೇಳುತ್ತಾ ಹಣ ಕಳುಹಿಸಿರುವ ಬಗ್ಗೆ ಕೆಲವು ಸ್ಕ್ರೀನ್ ಶಾಟ್‌ಗಳನ್ನೂ ಕಳುಹಿಸಿದ್ದಾನೆ.

ಇದನ್ನು ನಂಬಿದ ಅಂಗಡಿ ಮಾಲೀಕ 8,000 ರೂಪಾಯಿ ಕಳುಹಿಸಿ ಲಾಡು ಕಟ್ಟಿಡುತ್ತಾರೆ. ಆದರೆ ಲಾಡು ತೆಗೆದುಕೊಂಡು ಹೋಗಲು ಯಾರೂ ಬಾರದೇ ಇದ್ದಾಗ ಸಂಶಯದಿಂದ ಬ್ಯಾಂಕ್​ ಖಾತೆ ಪರಿಶೀಲಿಸಿದ್ದಾರೆ. ಆಗ ತನ್ನ ಖಾತೆಗೆ ಯಾವುದೇ ಹಣ ಬಂದಿಲ್ಲ ಮತ್ತು ತಾನು ಮೋಸ ಹೋಗಿರುವ ಬಗ್ಗೆ ಗೊತ್ತಾಗಿದೆ.

ಇದೇ ರೀತಿ ಹಲವು ಬಟ್ಟೆ ಅಂಗಡಿಗಳು, ದಿನಸಿ ಅಂಗಡಿಯವರೂ ಸಾಮಗ್ರಿ ಕಟ್ಟಿಟ್ಟು ಮೋಸ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಟ್ಟೆ ಅಂಗಡಿ, ಬೇಕರಿ, ದಿನಸಿ ಅಂಗಡಿಗಳ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಂಡೇ ವಂಚಿಸಲಾಗುತ್ತಿದ್ದು, ಇವರಿಗೆ ಸ್ಥಳೀಯವಾಗಿ ಮಾಹಿತಿ ನೀಡುವವರು ಇದ್ದಾರಾ? ಎಂಬ ಸಂಶಯ ಜನರಲ್ಲಿ ಮೂಡಿದೆ.

ಪೊಲೀಸ್​​ ಕಮಿಷನರ್‌ಗೂ ಸೈಬರ್ ಕಳ್ಳರ ಕಾಟ: ಮಂಗಳೂರು ಪೊಲೀಸ್ ಕಮಿಷನರ್​​ ಅನುಪಮ್ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಸೈಬರ್ ವಂಚಕರು 'Anupam Agarwal Ips' ಎಂಬ ಐಡಿ ಕ್ರಿಯೇಟ್​​ ಮಾಡಿದ್ದಾರೆ. ಕಮಿಷನರ್ ನಕಲಿ ಅಕೌಂಟ್​ನಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ‌ ಕಳುಹಿಸುವಂತೆ ಸಂದೇಶ ರವಾನಿಸುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಣ್ಣ ಪುಟ್ಟ ಮೊತ್ತ ಕಳೆದುಕೊಂಡವರು ಈ ಬಗ್ಗೆ ದೂರು ನೀಡುತ್ತಿಲ್ಲ. ಇದು ವಂಚಕರಿಗೆ ವರದಾನವಾಗುತ್ತಿದೆ. ಆನ್‌ಲೈನ್ ವಂಚನೆಗಳನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಇದನ್ನೂ ಓದಿ:ಮಂಗಳೂರು: ಸೈಬರ್ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನ: ಆರೋಪಿ ಬಂಧನ

ABOUT THE AUTHOR

...view details