ಕರ್ನಾಟಕ

karnataka

ಬೆಂಗಳೂರು: ಮುದ್ರಾ ಯೋಜನೆಯಡಿ ಸಾಲ ನೀಡುವುದಾಗಿ ನಂಬಿಸಿ ₹1.63 ಲಕ್ಷ ವಂಚನೆ

By ETV Bharat Karnataka Team

Published : Jan 25, 2024, 11:27 AM IST

ಸೈಬರ್‌ ವಂಚಕರು ವ್ಯಕ್ತಿಯೊಬ್ಬರಿಗೆ 1.63 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಂಚನೆ
ವಂಚನೆ

ಬೆಂಗಳೂರು:ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ(ಪಿಎಂಎಂವೈ) 10 ಲಕ್ಷ ರೂಪಾಯಿ ಸಾಲ ನೀಡುವುದಾಗಿ ಹೇಳಿ ವಿವಿಧ ಶುಲ್ಕಗಳ ನೆಪದಲ್ಲಿ 1.63 ಲಕ್ಷ ರೂ. ವರ್ಗಾಯಿಸಿಕೊಂಡು ಬಳಿಕ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹುಳಿಮಾವು ಪೊಲೀಸರಿಗೆ ಮೋಸ ಹೋದ ವ್ಯಕ್ತಿ ದೂರು ನೀಡಿದ್ದಾರೆ.

ಹುಳಿಮಾವು ನಿವಾಸಿ ಸಿ.ನಾರಾಯಣಸ್ವಾಮಿ ಎಂಬವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಸಂಪೂರ್ಣ ವಿವರ: ದೂರುದಾರರಿಗೆ ಹಣದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕುತ್ತಿದ್ದರು. ಈ ವೇಳೆ ಮೊಬೈಲ್‌ ಸಂಖ್ಯೆಯೊಂದು ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅಪರಿಚಿತರು ಮುದ್ರಾ ಯೋಜನೆಯಡಿ 10 ಲಕ್ಷ ರೂ. ಸಾಲ ನೀಡುವುದಾಗಿ ನಂಬಿಸಿದ್ದಾರೆ. ನಾರಾಯಣಸ್ವಾಮಿ ಅವರ ವೈಯಕ್ತಿಕ ವಿವರ, ಬ್ಯಾಂಕ್‌ ಖಾತೆ ಸೇರಿದಂತೆ ಎಲ್ಲಾ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮತ್ತು ಮುದ್ರಾ ಯೋಜನೆಯ ನಕಲಿ ಲೆಟರ್‌ಹೆಡ್‌ ಬಳಸಿ ನಿಮಗೆ 10 ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ಸಂದೇಶ ಕಳುಹಿಸಿದ್ದಾರೆ. ನಕಲಿ ಅಗ್ರಿಮೆಂಟ್‌, ನಕಲಿ ಬಾಂಡ್‌ಗಳು ಹಾಗೂ ನಕಲಿ ಸಾಲ ಮಂಜೂರಾತಿ ಪತ್ರಗಳನ್ನೂ ಲಗತ್ತಿಸಿದ್ದಾರೆ. ಸಾಲದ ಹಣ ನಿಮ್ಮ ಖಾತೆಗೆ ಕ್ರೆಡಿಟ್‌ ಆಗಲು ಕೆಲವು ಶುಲ್ಕಗಳನ್ನು ಪಾವತಿಸಬೇಕು ಎಂದು ವಿವಿಧ ಹಂತಗಳಲ್ಲಿ 1.65 ಲಕ್ಷ ರೂ. ಹಾಕಿಸಿಕೊಂಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ನಾರಾಯಣಸ್ವಾಮಿ ಈಗಾಗಲೇ ಕೊಟ್ಟಿರುವ ಹಣ ವಾಪಸ್‌ ಕೊಡುವಂತೆ ಕೇಳಿದ್ದಾರೆ. ಇದಾದ ಬಳಿಕ ವಂಚಕರು ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಾರೆ. ನಾರಾಯಣಸ್ವಾಮಿಗೆ ತಾನು ಸೈಬರ್‌ ವಂಚಕರ ಬಲೆಗೆ ಬಿದ್ದಿರುವುದು ಅರಿವಿಗೆ ಬಂದಿದೆ. ಹುಳಿಮಾವು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಹಣ ವರ್ಗಾವಣೆ ಸೋಗಿನಲ್ಲಿ ಯಾಮಾರಿಸುತ್ತಿದ್ದ ವಂಚಕನ ಬಂಧನ

ABOUT THE AUTHOR

...view details