ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪ್ರಾರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಿ.ಟಿ ರವಿ ಅವರು, ಕಿತ್ತೂರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅವರ ಸಹೋದರ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ ರವಿ ಮಧ್ಯೆ ನಡೆದ ಜಟಾಪಟಿ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿಸಿ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿ ಪ್ರಯಾಣಿಸುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಇಂದು ಬೆಳಗ್ಗಿನ ಜಾವ 5 ಗಂಟೆಗೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಅಪಘಾತಗೊಂಡಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಳರ್ ಮತ್ತು ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.
ಬೆಳಗಾವಿಗೆ ಬರುತ್ತಿದ್ದ ವೇಳೆರಸ್ತೆಯಲ್ಲಿ ಅಡ್ಡ ಬಂದ ಬಾಯಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗೆ ಬಂದು ಮರಕ್ಕೆ ಡಿಕ್ಕಿಯಾಗಿತ್ತು. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ. ಕಾರಿನಿಂದ ಏರ್ಬ್ಯಾಗ್ಗಳು ತೆರೆದುಕೊಂಡ ಕಾರಣ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿವೆ.
ಲಕ್ಷ್ಮಿ ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಸಿ.ಟಿ.ರವಿ (ETV Bharat) ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುತ್ತಿಗೆ, ಬೆನ್ನು, ಕೈ ಮತ್ತು ಕಾಲಿಗೆ ಮತ್ತು ಚೆನ್ನರಾಜ ಹಟ್ಟಿಹೊಳಿ ಅವರ ತಲೆಗೆ ಗಾಯವಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗನ್ ಮ್ಯಾನ್ ಮತ್ತು ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯ ಡಾ.ರವಿ ಪಾಟೀಲ ತಿಳಿಸಿದ್ದಾರೆ.
ಪುತ್ರ ಮೃಣಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಿನ್ನೆ ರಾತ್ರಿ ಸಿಎಲ್ಪಿ ಮೀಟಿಂಗ್ ಮುಗಿಸಿ ಬೆಳಗ್ಗೆ ವಿಮಾನದಲ್ಲಿ ಬರಬೇಕಾಗಿತ್ತು. ಆದರೆ, ಇಂದು ಬೆಳಗ್ಗೆ ಕ್ಷೇತ್ರದಲ್ಲಿ ಎರಡ್ಮೂರು ಮುಖ್ಯವಾದ ಕೆಲಸಗಳಿದ್ದ ಹಿನ್ನೆಲೆ ರಸ್ತೆ ಮೂಲಕ ಆಗಮಿಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ದೇವರು ಮತ್ತು ಜನರ ಆಶೀರ್ವಾದದಿಂದ ದೊಡ್ಡ ಗಾಯಗಳೇನೂ ಆಗಿಲ್ಲ. ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಕರೆ ಮಾಡಿ ತಾಯಿಯವರ ಆರೋಗ್ಯ ವಿಚಾರಿಸಿದ್ದಾರೆ. ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಿತ್ತೂರು ಬಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: ಆಸ್ಪತ್ರೆಗೆ ದಾಖಲು