ವಿಜಯಪುರ/ಕೊಪ್ಪಳ:ಎರಡು ಪ್ರತ್ಯೇಕ ಘಟನೆಗಳಲ್ಲಿ ಸಮರ್ಪಕ ದಾಖಲೆಗಳಿಲ್ಲದೇ ನಗದು ಸಾಗಿಸುತ್ತಿದ್ದು, ಪೊಲೀಸರು ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಗಳು ವಿಜಯಪುರ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕಂಡು ಬಂದಿದೆ.
ವಿಜಯಪುರದಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ:ಸಮರ್ಪಕ ದಾಖಲೆಗಳಿಲ್ಲದೇ ಅಪಾರ ಪ್ರಮಾಣದ ನಗದನ್ನು ವಾಹನ ಒಂದರಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ, ಪೊಲೀಸರು ವಾಹನವನ್ನು ಪರಿಶೀಲನೆ ಮಾಡಿದಾಗ ಅಪಾರ ಪ್ರಮಾಣದ ಹಣ ದೊರೆತಿದ್ದು, ಆ ವಾಹನ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಪ್ರತಿ ವಾಹನವನ್ನ ತಪಾಸಣೆ ಮಾಡಲಾಗುತ್ತಿದೆ. ವಿಜಯಪುರ ನಗರದ ಹೊರವಲಯದ ಸಿಂದಗಿ ಬೈಪಾಸ್‌ಬಳಿಯ ಚೆಕ್ಪೋಸ್ಟ್ನಲ್ಲಿ ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ ಹೈದರಾಬಾದ್‌ದಿಂದ ಹುಬ್ಬಳ್ಳಿಗೆ ಸೂಕ್ತ ದಾಖಲೆಗಳಿಲ್ಲದೇ, ಟೋಯೊಟಾ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೋಟಿ 93 ಲಕ್ಷದ 50 ಸಾವಿರ ನಗದನ್ನು ಪೊಲೀಸರು ಜಪ್ತಿ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಜಿ ನಿಕ್ಕಂ ಮತ್ತು ಸಚಿನ ಮೋಯಿತೆ ಎನ್ನುವವರನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಿಂದ 2 ಕೋಟಿ 93 ಲಕ್ಷದ 50 ಸಾವಿರ ನಗದು, ಟೋಯೋಟಾ ಕಾರು, ಎರಡು ಮೊಬೈಲ್ಗಳನ್ನು ಪೊಲೀಸರು ಜಪ್ತಿ ಮಾಡಿದರು. ಈ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪತ್ತೆ ಕಾರ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವೈಖರಿಯನ್ನ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಶ್ಲಾಘಿಸಿ ಪುರಸ್ಕರಿಸಿ, ಬಹುಮಾನ ಘೋಷಿಸಿದ್ದಾರೆ.