ಬೆಂಗಳೂರು: ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡಬಹುದು ಎನ್ನುವ ಆಮಿಷವೊಡ್ಡಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ಬಯಲಿಗೆಳಿದಿರುವ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು 11 ಮಂದಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.
ವಿದ್ಯಾರಣ್ಯಪುರ ನಿವಾಸಿ ಭವ್ಯಾ ಎಂಬುವರಿಗೆ ಟ್ರೇಡ್ ಸ್ಟೇಷನ್ ಕಂಪೆನಿ ಹೆಸರಿನಲ್ಲಿ ಸಂಪರ್ಕಿಸಿದ್ದ ಆರೋಪಿಗಳು ಹಣ ಹೂಡಿಕೆ ಮಾಡಿದರೆ ಮನೆಯಲ್ಲಿ ಕುಳಿತು ಹೆಚ್ಚುವರಿ ಹಣ ಸಂಪಾದಿಸಬಹುದು ಎಂಬ ಪೊಳ್ಳು ಭರವಸೆಯನ್ನು ನೀಡಿದ್ದರು. ಇದನ್ನು ನಂಬಿ ಅವರು ಹೂಡಿಕೆಯನ್ನೂ ಮಾಡಿದ್ದರು. ಆದರೆ ಆರೋಪಿಗಳು ಭವ್ಯಾ ಅವರಿಗೆ ಹಂತ-ಹಂತವಾಗಿ 18.75 ಲಕ್ಷ ರೂಪಾಯಿ ವಂಚಿಸಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಅಮಿರ್ ಸುಹಾಲಿ, ಇನಾಯತ್ ಖಾನ್, ನಯಾಜ್ ಅಹಮದ್, ಆದಿಲ್ ಆಗಾ, ಸಯ್ಯದ್ ಅಬ್ಬಾಸ್ ಆಲಿಖಾನ್ ಹಾಗೂ ಮಿಥುಲ್ ಮನೀಶ್ ಷಾ ಸೇರಿದಂತೆ ರಾಜ್ಯ ಹಾಗೂ ಅಂತಾರಾಜ್ಯ ವಂಚಕರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ನಗರ ಆಯುಕ್ತ ಬಿ. ದಯಾನಂದ್, "ಮುಗ್ಧ ಜನರನ್ನು ಗುರಿಯಾಗಿಸಿ ಅವರ ವಾಟ್ಸ್ಯಾಪ್ ನಂಬರ್ಗಳಿಗೆ 'ಮನೆಯಲ್ಲಿ ಕುಳಿತು ದಿನಕ್ಕೆ ಸಾವಿರಾರು ರೂ. ಸಂಪಾದಿಸಬಹುದು' ಎನ್ನುವ ಸಂದೇಶದ ಮೂಲಕ ಆಮಿಷವೊಡ್ಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಬಳಿಕ ಟೆಲಿಗ್ರಾಮ್ ವಿಐಪಿ ವಿಎನ್ 6 ಗ್ರೂಪ್ ಮೂಲಕ ಇಂತಿಷ್ಟು ಟಾಸ್ಕ್ಗಳಿಗೆ ಇಂತಿಷ್ಟು ಕಮಿಷನ್ ಎಂದು ನಿಗದಿಪಡಿಸಿದ್ದರು. ಆರಂಭದಲ್ಲಿ ಕಮಿಷನ್ ನೀಡಿದ್ದ ಆರೋಪಿಗಳು ಬಳಿಕ ದೂರುದಾರರಿಂದ ಹಂತ-ಹಂತವಾಗಿ 18.75 ಲಕ್ಷ ರೂಪಾಯಿ ವಂಚಿಸಿದ್ದರು." ಎಂದು ತಿಳಿಸಿದರು.