ಕರ್ನಾಟಕ

karnataka

ETV Bharat / state

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್ ಸೇರಿ 7 ಮಂದಿಗೆ ನಾಳೆ ಶಿಕ್ಷೆ ಪ್ರಕಟ - BELEKERI IRON ORE CASE

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿಗಳಾದ ಶಾಸಕ ಸತೀಶ್ ಸೈಲ್ ಸೇರಿ 7 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆ ಶಿಕ್ಷೆ ಪ್ರಕಟಿಸಲಿದೆ.

belekeri case
ಸತೀಶ್ ಸೈಲ್, ಕೋರ್ಟ್​ (ETV Bharat)

By ETV Bharat Karnataka Team

Published : Oct 25, 2024, 4:41 PM IST

ಬೆಂಗಳೂರು:ಕಾರವಾರದ ಬೇಲೆಕೇರಿ ಬಂದರಿನಲ್ಲಿ ನಡೆದ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಸೇರಿ ಇತರರು 'ದೋಷಿ' ಎಂದಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಿಕ್ಷೆ ಪ್ರಮಾಣದ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

ಇಂದು ಸಿಬಿಐ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ, "ಆರೋಪಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಗರಿಷ್ಠ ಜೈಲು ಶಿಕ್ಷೆಯ ಜೊತೆ ದಂಡ ವಿಧಿಸಬೇಕು" ಎಂದು ಮನವಿ ಸಲ್ಲಿಸಿದರು.

ಮತ್ತೊಂದೆಡೆ, ಶಾಸಕ ಸತೀಶ್ ಸೈಲ್ ಪರ ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡಿಸಿ, "ಸತೀಶ್ ಸೈಲ್ ಅವರಿಗೆ ಅನಾರೋಗ್ಯದ ಸಮಸ್ಯೆಗಳಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿಯೇ ಜಾಮೀನು ಪಡೆದುಕೊಂಡಿದ್ದರು. ಕಳ್ಳತನ, ಭ್ರಷ್ಟಾಚಾರ ಕಾಯ್ದೆಯಡಿ ಗರಿಷ್ಠ ಶಿಕ್ಷೆ 3 ವರ್ಷಗಳಾಗಿದೆ. ಆದ್ದರಿಂದ 3 ವರ್ಷಕ್ಕಿಂತಲೂ ಕನಿಷ್ಠ ಶಿಕ್ಷೆ ವಿಧಿಸಬೇಕು" ಎಂದು ಮನವಿ ಮಾಡಿದರು.

ಕಾರವಾರದ ಶಾಸಕ ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ.ಸಂತೋಷ್ ಗಜಾನನ ಭಟ್ ಗುರುವಾರ ತೀರ್ಪು ನೀಡಿದ್ದರು. ಅಲ್ಲದೆ, ಶಿಕ್ಷೆ ಪ್ರಮಾಣವನ್ನು ಶುಕ್ರವಾರ(ಇಂದು) ಪ್ರಕಟಿಸುವುದಾಗಿ ಆದೇಶದಲ್ಲಿ ತಿಳಿಸಿದ್ದರು. ದೋಷಿಗಳೆಂದು ಕೋರ್ಟ್​ ಆದೇಶ ನೀಡಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಎಲ್ಲ 7 ಮಂದಿಯನ್ನೂ ಬಂಧಿಸಿದ್ದಾರೆ.

ಶಾಸಕ ಸತೀಶ್ ಸೈಲ್, ಬಂದರು ಅಧಿಕಾರಿ ಮಹೇಶ್ ಬಿಳಿಯ, ಲಾಲ್ ಮಹಲ್ ಕಂಪನಿಯ ಮಾಲೀಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಕೆ.ವಿ.ನಾಗರಾಜ್, ಗೋವಿಂದರಾಜು, ಆಶಾಪುರ ಕಂಪನಿ ಮಾಲೀಕ ಚೇತನ್ ಇವರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಪ್ರಕರಣದ ಹಿನ್ನೆಲೆ:ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಸಾಗಿಸಲು ಕಾರವಾರದ ಬೇಲೆಕೇರಿ ಬಂದರಿಯಲ್ಲಿ 11,312 ಮೆಟ್ರಿಕ್ ಟನ್ ಅದಿರನ್ನು ಸಂಗ್ರಹಿಸಲಾಗಿತ್ತು. ಇದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಅನುಮತಿ ಇಲ್ಲದೇ ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ಅವರು ಇದನ್ನು ವಿದೇಶಕ್ಕೆ ಸಾಗಾಟ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕ 6 ಪ್ರಕರಣಗಳು ದಾಖಲಾಗಿದ್ದವು. ಲೋಕಾಯುಕ್ತ ಮತ್ತು ಸಿಬಿಐ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದವು.

ನ್ಯಾ.ಸಂತೋಷ್ ಗಜಾನನ ಭಟ್ ಅವರು ಪ್ರಕರಣದ ವಾದ-ಪ್ರತಿವಾದ ಆಲಿಸಿ, ಶಾಸಕ ಸತೀಶ್ ಸೈಲ್ ತಪ್ಪಿತಸ್ಥರು ಎಂದು ಆದೇಶ ನೀಡಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ನಾಳೆ ಪ್ರಕಟವಾಗಲಿದ್ದು, ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ. ಶಿಕ್ಷೆಯ ಪ್ರಮಾಣ ಎಷ್ಟು ಯಾವ ಮಾನದಂಡದ ಮೇಲೆ ಶಿಕ್ಷೆ ನೀಡಲಾಗುತ್ತದೆ ಎಂಬುದು ಕೋರ್ಟ್ ಆದೇಶದ ನಂತರ ತಿಳಿಯಲಿದೆ.

ಇದನ್ನೂ ಓದಿ:ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್ ಸೇರಿ 7 ಮಂದಿ ದೋಷಿ, ಇಂದು ಶಿಕ್ಷೆ ಪ್ರಕಟ

ABOUT THE AUTHOR

...view details