ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಅಂತಿಮ ಆದೇಶ ಸೋಮವಾರ ಹೊರಬೀಳಲಿದೆ.
ಸರ್ಕಾರದ ಅಭಿಯೋಜಕ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರ ಸುದೀರ್ಘ ವಾದ-ಪ್ರತಿವಾದ ಆಲಿಸಿದ 57ನೇ ಸಿಸಿಹೆಚ್ ನ್ಯಾಯಾಲಯದ ನ್ಯಾ. ಜೈಶಂಕರ್ ಅವರು ಅ.14ಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಆದೇಶ ಇದೇ ದಿನವೇ ಬರಲಿದೆ. ದರ್ಶನ್ಗೆ ಜಾಮೀನು ಸಿಗದಿದ್ದರೆ ಹೈಕೋರ್ಟ್ಗೆ ಹೋಗುವ ಸಾಧ್ಯತೆಯಿದೆ.
ಸಾಕ್ಷಿಗಳ ಹೇಳಿಕೆ ದಾಖಲಿಸುವಲ್ಲಿ ವಿಳಂಬ ತೋರಿಸಿಲ್ಲ ಎಂದು ನಿನ್ನೆ(ಬುಧವಾರ) ಪ್ರಸನ್ನ ಕುಮಾರ್ ಅವರ ವಾದಕ್ಕೆ ಇಂದು ಪ್ರತಿಯಾಗಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿದರು. ಜೂನ್ 9ರಂದು ಆರೋಪಿ ಇರುವ ಸ್ಥಳದ ಬಗ್ಗೆ ಗೂಗಲ್ ನಕ್ಷೆ ಅಥವಾ ಸ್ಯಾಟಲೈಟ್ ಚಿತ್ರವನ್ನ ತೋರಿಸಿದ್ದಾರೆ ಎಂದು ಭಾವಿಸಿದ್ದೆ. ಪರಿಶೀಲಿಸಿದಾಗ ಪೊಲೀಸರು ಗೂಗಲ್ ಮ್ಯಾಪ್ ತೆಗೆದುಕೊಂಡು ಅಂಟಿಸಿ ನಕ್ಷೆ ತಯಾರಿಸಿರುವುದು ಗೊತ್ತಾಯಿತು. ಮಧ್ಯೆ ಪ್ರವೇಶಿಸಿದ ನ್ಯಾಯಾಧೀಶರು ನಕ್ಷೆಯ ಕೆಳಗೇ ಅದನ್ನು ಬರೆದಿದ್ದಾರೆ. ಲೊಕೇಷನ್ ಆಧಾರದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಪೊಲೀಸರೇ ಬರೆದಿದ್ದಾರೆ ಎಂದರು. ತನಿಖಾಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ನಕ್ಷೆಯನ್ನ ಸಿದ್ಧಪಡಿಸಿದ್ದಾರೆ. ಇದು ಗೂಗಲ್ ಪಿಕ್ಚರ್, ಸ್ಯಾಟಲೈಟ್ ಪಿಕ್ಚರ್ ಅಲ್ಲ. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅಂಟಿಸಿದ ಚಿತ್ರವಾಗಿದೆ. ಗೂಗಲ್ ವಿಳಾಸ ಪಡೆದಿಲ್ಲ. ಕರೆ ವಿವರ ಸಂಗ್ರಹಿಸಿಲ್ಲ. ಅದ್ಯಾವುದೂ ಇಲ್ಲದೇ ಈ ಸಾಕ್ಷಿಗಳು ಕೃತ್ಯದ ಸ್ಥಳದಲ್ಲಿದ್ದರೆಂದು ಹೇಗೆ ಹೇಳುತ್ತಾರೆ ಎಂದು ದರ್ಶನ್ ಪರ ವಕೀಲರು ಪ್ರಶ್ನಿಸಿದರು.
ಇದೇ ಟವರ್ ಲೊಕೇಷನ್ ವ್ಯಾಪ್ತಿಯಲ್ಲಿಯೇ ಆರೋಪಿಗಳ ವಾಸಸ್ಥಾನವಿದೆ. ಹೀಗಿರುವುದರಿಂದ ಕೃತ್ಯ ನಡೆದಾಗ ಇವರೆಲ್ಲಾ ಶೆಡ್ನಲ್ಲಿದ್ದರೆಂದು ಸಾಬೀತಾಗುವುದಿಲ್ಲ. ಐಪಿ ಅಡ್ರೆಸ್ ಮೂಲಕ ಇರುವ ಸಿಟಿ ಮಾತ್ರ ತೋರಿಸಬಹುದು. ನಾನು ಈಗ ನ್ಯೂಯಾರ್ಕ್ ನಲ್ಲಿರುವಂತೆಯೂ ತೋರಿಸಬಹುದು. ತಾಂತ್ರಿಕ ವರದಿಗಳ ಪ್ರಕಾರ 5 ಮೈಲಿಗಳಿಂದ 25 ಮೈಲಿಗಳವರೆಗೂ ಇದರ ವ್ಯಾಪ್ತಿಯಿದೆ. ಹೀಗಿದ್ದಾಗ ಪಟ್ಟಣಗೆರೆ ಶೆಡ್ನಲ್ಲೇ ಇವರೆಲ್ಲರೂ ಇದ್ದರೆಂದು ಹೇಳುವುದು ಹೇಗೆ ಎಂದರು.
ರೇಣುಕಾಸ್ವಾಮಿ ಕೊಲೆಯಾದಾಗ ಸಾಕ್ಷಿಗಳು ಅಲ್ಲಿಯೇ ಇದ್ದರೆಂದು ಹೇಳುವುದು ಹೇಗೆ? ಆರೋಪಿಗಳು ಅಲ್ಲಿಯೇ ಇದ್ದರೆಂದು ಐಪಿ ಅಡ್ರೆಸ್ ಮೂಲಕವೂ ಹೇಳುವುದಕ್ಕೆ ನಂಬಲಸಾಧ್ಯ. ನಾನು ಕಚೇರಿಯಿಂದ ನೇರವಾಗಿ ಈ ಕೋರ್ಟ್ಗೆ ಬಂದಿದ್ದೇನೆ. ಆದರೆ ನಾನು ನನ್ನ ಕಚೇರಿಯಿಂದ ಎಸಿಪಿ ಚಂದನ್ ಕುಮಾರ್ ಕಚೇರಿಗೆ, ನಂತರ ವಿಧಾನಸೌಧಕ್ಕೆ ಹೋಗಿದ್ದಾಗಿ ಎಡಿಟ್ ಮಾಡಬಹುದು. ಗೂಗಲ್ ಮ್ಯಾಪ್ ಅನ್ನು ಎಡಿಟ್ ಮಾಡಲೂ ಅವಕಾಶವಿದೆ ಎಂದು ವಿವರಿಸಿದರು.
ಪ್ರತ್ಯಕ್ಷ ಸಾಕ್ಷಿಯೋರ್ವರು ಮಲೆಮಹದೇಶ್ವರ ಬೆಟ್ಟ, ಗೋವಾ, ತಿರುಪತಿಗೆ ಹೋಗಿದ್ದರು. ಹೀಗಾಗಿ ಅವರ ಹೇಳಿಕೆ ದಾಖಲಿಸಲು ವಿಳಂಬವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇವರ ಹೇಳಿಕೆಯು ಗಣೇಶ-ಸುಬ್ರಹ್ಮಣ್ಯನ ಕಥೆಯಂತಿದೆ. ಪ್ರಪಂಚ ಸುತ್ತಿ ಬರಲು ಹೇಳಿದಾಗ ಸುಬ್ರಹ್ಮಣ್ಯ ಎಲ್ಲವನ್ನೂ ಸುತ್ತಿ ಬಂದರೆ, ಗಣೇಶ ಶಿವ ಪಾರ್ವತಿ ಮಾತ್ರ ಸುತ್ತಿದನಂತೆ. ಈ ಕೇಸಿನ ಸಾಕ್ಷಿಯ ಕಥೆಯೂ ಹೀಗೇ ಇದೆ. ಈತ ಎಲ್ಲೂ ಹೋಗಿರಲಿಲ್ಲ. ಇವರೇ ಅವನು ಸುತ್ತಾಡಿದಂತೆ ತೋರಿಸಿದ್ದಾರೆ ಎಂದು ವಾದಿಸಿದರು.