ಕರ್ನಾಟಕ

karnataka

ETV Bharat / state

ಪೋಕ್ಸೋ ಪ್ರಕರಣ: ಜಾಮೀನಿನ ಮೇಲೆ ಮುರುಘಾ ಶ್ರೀ ಬಿಡುಗಡೆಗೆ ಕೋರ್ಟ್ ಆದೇಶ - POCSO CASE

ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಚಿತ್ರದುರ್ಗದ ಕೋರ್ಟ್ ಆದೇಶಿಸಿದೆ.

MURUGHA MUTT SEER
ಮುರುಘಾ ಶ್ರೀ ಬಿಡುಗಡೆಗೆ ಕೋರ್ಟ್ ಆದೇಶ (ETV Bharat)

By ETV Bharat Karnataka Team

Published : Oct 7, 2024, 3:30 PM IST

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಮುರುಘಾಶ್ರೀ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದು 4 ಗಂಟೆಯ ಬಳಿಕ ಮುರುಘಾ ಶ್ರೀ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆಯು ಇಂದು ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಲ್ಲಿ ನಡೆಯಿತು. 'ಪ್ರಕರಣದಲ್ಲಿ ಈ ಹಿಂದೆ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ಸಂತ್ರಸ್ತೆಯ ಪರ ವಕೀಲರು, ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರಕರಣದ ಎಲ್ಲ ಸಾಕ್ಷಿಗಳ ವಿಚಾರಣೆ ಪೂರ್ಣವಾದ ಬಳಿಕ ಜಾಮೀನು ಮಂಜೂರು ಮಾಡುವಂತೆ ಆದೇಶಿಸಿತ್ತು. ಇದೀಗ ಎಲ್ಲ ಸಾಕ್ಷಿಗಳ ವಿಚಾರಣೆ ಪೂರ್ಣವಾಗಿದ್ದು, ತಮ್ಮ ಕಕ್ಷಿದಾರರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ' ಕೋರ್ಟ್​ಗೆ ಮುರುಘಾ ಶ್ರೀ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಇಂದು ಮನವಿ ಮಾಡಿದರು.

ಮುರುಘಾ ಶ್ರೀ ಪರ ವಕೀಲರಿಂದ ಮಾಹಿತಿ (ETV Bharat)

ಈ ಮನವಿ ಆಲಿಸಿದ ಬಳಿಕ ಕೋರ್ಟ್, ಮುರುಘಾ ಶ್ರೀಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿ ಜಿಲ್ಲಾ ಕಾರಾಗೃಹಕ್ಕೆ ಸೂಚನೆ ನೀಡಿದೆ. ಜೈಲಿನಿಂದ ಮುರುಘಾಶ್ರೀ ಅವರನ್ನು ಇಂದು ಕೋರ್ಟ್ ವಿಚಾರಣೆಗೆ ಕರೆತರಲಾಗಿತ್ತು.

'ಮುರುಘಾ ಶರಣರಿಗೆ ಈ ಹಿಂದೆ ಜಾಮೀನು ಮಂಜೂರು ಆಗಿತ್ತು. ಬಳಿಕ ಈ ಜಾಮೀನು ಮಂಜೂರು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಸಾಕ್ಷಿಗಳ ವಿಚಾರಣೆ ಪೂರ್ಣವಾದ ಬಳಿಕ ಜಾಮೀನು ನೀಡುವಂತೆ ಆದೇಶಿಸಿತ್ತು. ಇದೀಗ ಎಲ್ಲ 13 ಸಾಕ್ಷಿಗಳ ವಿಚಾರಣೆ ಮುಗಿದಿದ್ದರಿಂದ ಕೋರ್ಟ್ ಜಾಮೀನು ನೀಡಿದೆ. ಈ ಹಿಂದೆ ಹೈಕೋರ್ಟ್ ವಿಧಿಸಿದ್ದ ಷರತ್ತಿನ ಮೇಲೆ ಮುರುಘಾ ಶರಣರು ಬಿಡುಗಡೆಯಾಗಲಿದ್ದಾರೆ. ಮುರುಘಾ ಶರಣರನ್ನು ಬಿಡುಗಡೆ ಮಾಡುವಂತೆ ಕಾರಾಗೃಹ ಅಧಿಕಾರಿಗಳಿಗೆ ಎರಡನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಇಂದು ಸಂಜೆ 4 ಗಂಟೆ ಬಳಿಕ ಕಾರಾಗೃಹ ಅಧಿಕಾರಿಗಳು ತಮ್ಮ ಪ್ರಕ್ರಿಯೆ ಪೂರ್ಣಗೊಳಿಸಿ ಬಿಡುಗಡೆ ಮಾಡಲಿದ್ದಾರೆ' ಎಂದು ಚಿತ್ರದುರ್ಗದ ಮುರುಘಾ ಶ್ರೀಗಳ ಪರ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಜಾತಿ ಗಣತಿ ಬಗ್ಗೆ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಮುಂದಿನ‌ ಕ್ರಮ: ಮಲ್ಲಿಕಾರ್ಜುನ ಖರ್ಗೆ - Mallikarjuna Kharge

ABOUT THE AUTHOR

...view details