ಕರ್ನಾಟಕ

karnataka

ETV Bharat / state

ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ಸೆ.25ಕ್ಕೆ ಮುಂದೂಡಿದ ನ್ಯಾಯಾಲಯ - MLA Munirathna Bail Plea

ಆತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಮುಂಡೂಡಿದೆ.

munirathna
ಮುನಿರತ್ನ (ETV Bharat)

By ETV Bharat Karnataka Team

Published : Sep 23, 2024, 4:58 PM IST

ಬೆಂಗಳೂರು:ಆತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯು ಮುಂಡೂಡಿಕೆಯಾಗಿದೆ. ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್​ 25ಕ್ಕೆ ಮುಂದೂಡಿ ಆದೇಶಿಸಿದೆ.

ರಾಮನಗರದ ಕಗ್ಗಲಿಪುರ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿರುವ ಆತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮುನಿರತ್ನ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಇಂದು ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ವಾದ ಮಂಡಿಸಿದ ಎಸ್​​ಐಟಿ ವಿಶೇಷ ಅಭಿಯೋಜಕ (ಎಸ್ ಪಿಪಿ) ಎಸ್.ಪಿ. ಪ್ರದೀಪ್, ''ದೂರುದಾರ ಮಹಿಳೆಗೆ ಜಾಮೀನು ಅರ್ಜಿ ಸಿಕ್ಕಿಲ್ಲ. ಅಲ್ಲದೆ, ನನಗೂ ಇಂದು ನೋಟಿಸ್ ಪ್ರತಿ ದೊರೆತಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು'' ಎಂದು ಮನವಿ ಮಾಡಿದರು. ಈ ಮನವಿ ಮಾನ್ಯ ಮಾಡಿದ ಕೋರ್ಟ್, ಸೆಪ್ಟೆಂಬರ್ 25ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪೊಲೀಸ್ ಕಸ್ಟಡಿ ಕೋರಿ ಎಸ್ಐಟಿ ಮನವಿ:ಮತ್ತೊಂದೆಡೆ, ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನ ಅವರನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕೆಂದು ವಿಶೇಷ ತನಿಖಾ ತಂಡ (ಎಸ್ಐಟಿ) ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಸಹ ನಡೆಯಿತು. ಪ್ರಕರಣ ಸಂಬಂಧ ದೂರುದಾರ ಮಹಿಳೆಗೆ ಕೋರ್ಟ್​ ನೋಟಿಸ್ ಜಾರಿ ಮಾಡಿದೆ. ಜೈಲಿನಲ್ಲಿರುವ ಕಾರಣ ಆರೋಪಿ ಮುನಿರತ್ನ ಅವರನ್ನು ನಾಳೆ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕೆಂದು ಜೈಲಾಧಿಕಾರಿಗಳಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಇದನ್ನೂ ಓದಿ:ಕೋರ್ಟ್​ ಕಲಾಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಸ್ಥಗಿತಕ್ಕೆ ಹೈಕೋರ್ಟ್‌ಗೆ ವಕೀಲರ ಸಂಘ ಮನವಿ - Advocates Appeals To High Court

ABOUT THE AUTHOR

...view details