ಕರ್ನಾಟಕ

karnataka

ETV Bharat / state

ಪುತ್ತೂರಿನಲ್ಲಿ ನಗರಸಭಾ ಮಟ್ಟದ ದೇಶದ ಮೊದಲ ಹಸಿಕಸ ಬಯೋ ಸಿಎನ್‌ಜಿ ಘಟಕ ಸಿದ್ಧ - Puttur Bio CNG Plant - PUTTUR BIO CNG PLANT

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯಲ್ಲಿ ಹಸಿಕಸದ ಬಯೋ ಸಿಎನ್‌ಜಿ ಘಟಕ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದೆ.

CNG Gas Unit
ಬಯೋ ಸಿಎನ್‌ಜಿ ಘಟಕ (ETV Bharat)

By ETV Bharat Karnataka Team

Published : Aug 15, 2024, 3:49 PM IST

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ ಮಾತನಾಡಿದರು. (ETV Bharat)

ಪುತ್ತೂರು(ದಕ್ಷಿಣ ಕನ್ನಡ): ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಯಾವ ರೀತಿ ವಿಲೇವಾರಿ ಮಾಡುವುದು ಎಂಬ ಚಿಂತೆ ಪ್ರತಿಯೊಂದು ಮನೆ, ಸ್ಥಳೀಯಾಡಳಿತ, ಪಾಲಿಕೆಗಳು ಸೇರಿದಂತೆ ಎಲ್ಲರಲ್ಲಿದೆ. ಕಸ ತುಂಬಿದ ಡಂಪಿಂಗ್ ಯಾರ್ಡ್​ಗಳೇ ಇಂದು ಪರಿಸರಕ್ಕೆ ಮಾರಕವಾಗುತ್ತಿವೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಮುಂದಾಗಿದೆ.

ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಹಸಿ ಕಸದಿಂದ ಸಿಎನ್‌ಜಿ ಗ್ಯಾಸ್ ಉತ್ಪಾದಿಸುವ ಯೋಜನೆ ಇದೀಗ ಅಂತಿಮ ಹಂತ ತಲುಪಿದೆ. ನಗರಸಭಾ ಮಟ್ಟದಲ್ಲಿ ಇಂಥ ಯೋಜನೆಯನ್ನು ರೂಪಿಸಿರುವ ದೇಶದ ಮೊದಲ ನಗರಸಭೆ ಎನ್ನುವ ಖ್ಯಾತಿಗೂ ಪುತ್ತೂರು ನಗರಸಭಾ ಭಾಜನವಾಗಿದೆ.

ಡಂಪಿಂಗ್ ಯಾರ್ಡ್​ನಲ್ಲಿ ಬೆಂಕಿ ಕಾಣಿಸಿಕೊಂಡು ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದ್ದ ನಗರಸಭೆಯ ಡಂಪಿಂಗ್ ಯಾರ್ಡ್, ಮುಂದಿನ ಕೆಲವೇ ದಿನಗಳಲ್ಲಿ ಮಾದರಿ ಡಂಪಿಂಗ್ ಯಾರ್ಡ್ ಆಗಿ ಬದಲಾಗಲಿದೆ. ಕಸದ ಪರ್ವತ ಮತ್ತು ದುರ್ವಾಸನೆ ದೂರವಾಗಲಿದೆ.

ರೋಟರಿ ಕ್ಲಬ್ ಪುತ್ತೂರು ಪೂರ್ವದ ಚಾರಿಟೇಬಲ್ ಟ್ರಸ್ಟ್, ಸ್ವಚ್ಛ ಭಾರತ್ ಟ್ರಸ್ಟ್ ಮತ್ತು ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಗಳು ಸೇರಿಕೊಂಡು ಬನ್ನೂರಿನಲ್ಲಿರುವ ಡಂಪಿಂಗ್ ಯಾರ್ಡ್​ನಲ್ಲಿ ಬಯೋ ಸಿಎನ್‌ಜಿ ಘಟಕ ಆರಂಭಿಸಿವೆ. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕ ನಿರ್ಮಾಣಗೊಂಡಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ 8 ಟನ್ ವಿಂಗಡಿಸಿದ ಹಸಿಕಸ ಬಳಸಿಕೊಂಡು ಇಲ್ಲಿ ಸುಮಾರು 500 ಕಿಲೋ ಸಿಎನ್‌ಜಿ ಉತ್ಪಾದನೆಯಾಗಲಿದೆ. ಸಿಎನ್‌ಜಿ ಜೊತೆಗೆ ಸ್ಲರಿಯೂ ಉತ್ಪಾದನೆಯಾಗಲಿದ್ದು, ಸಾವಯವ ಗೊಬ್ಬರದ ರೂಪದಲ್ಲೂ ಬಳಸಬಹುದು.

ದೇಶದಲ್ಲಿ ವಿವಿಧ ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ಇಂತಹ ಘಟಕ ಕಾರ್ಯಾಚರಿಸುತ್ತಿದ್ದು, ನಗರಸಭಾ ವ್ಯಾಪ್ತಿಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪುತ್ತೂರು ನಗರಸಭೆಯಲ್ಲಿ ಈ ಪ್ರಯತ್ನ ನಡೆಯುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಎಲ್ಲಾ ವಾಹನಗಳಿಗೆ ಇದೇ ಘಟಕದಲ್ಲಿ ಉತ್ಪಾದಿಸಿದ ಸಿಎನ್‌ಜಿ ಬಳಸಲು ನಿರ್ಧರಿಸಲಾಗಿದ್ದು, ಈಗಾಗಲೇ ಎರಡು ಹೊಸ ಸಿಎನ್‌ಜಿ ಮೂಲಕ ಚಲಿಸುವ ವಾಹನಗಳನ್ನು ಖರೀದಿಸಲಾಗಿದೆ.

ಕಸದ ರಾಶಿ (ETV Bharat)

ಈ ವಾಹನಗಳನ್ನು ಬಳಸಿ ಉಳಿದ ಸಿಎನ್‌ಜಿಯನ್ನು ಖಾಸಗಿ ವಾಹನಗಳಿಗೂ ನೀಡಲು ನಿರ್ಧರಿಸಲಾಗಿದೆ. ಒಂದೆಡೆ ಕಸದಿಂದಾಗಿ ಪರಿಸರದಲ್ಲಾಗುತ್ತಿದ್ದ ದುರ್ವಾಸನೆ ಮತ್ತು ಡೀಸೆಲ್ ಹಾಗೂ ಇತರ ವಾಹನಗಳಿಂದಾಗುವ ಪರಿಸರ ಮಾಲಿನ್ಯವನ್ನು ಬಯೋ ಸಿಎನ್‌ಜಿ ಮೂಲಕ ನಿಯಂತ್ರಿಸುವ ಉದ್ಧೇಶವೂ ಈ ಘಟಕದ್ದಾಗಿದೆ. ಸಿಎನ್‌ಜಿ ಘಟಕದ ಜೊತೆಗೆ ಪ್ರಸ್ತುತ ಇರುವ ಡಂಪಿಂಗ್ ಯಾರ್ಡನ್ನು ಹಸಿರು ಉದ್ಯಾನವನ್ನಾಗಿ ರೂಪಿಸಲೂ ಯೋಜನೆ ರೂಪಿಸಲಾಗಿದೆ.

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, "ಸ್ವಚ್ಛ ಪುತ್ತೂರು. ಇದೊಂದು ಹತ್ತು ವರ್ಷದ ಕನಸು. 2014ರಲ್ಲಿ ದೇಸಿ ಪ್ರೆಸಿಡೆಂಟ್ ಆಗಿದ್ದಾಗ ಪುತ್ತೂರು ಮುನ್ಸಿಪಾಲಿಟಿಯೊಡನೆ ಸೇರಿ ವಿಂಗಡನೆ ಮಾಡಿ ಕಸ ಸಂಗ್ರಹ ಮಾಡುವ ಶುರುವಾದ ಒಂದು ಕನಸು. 2020-21ರಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಯೊಂದಿಗೆ ಸೇರಿ ಈ ಪ್ರಾಜೆಕ್ಟ್ ನಡೆಯುತ್ತಿದೆ. ಮೂರು ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. 6 ಟನ್ ಕಸವನ್ನು ಇದರಲ್ಲಿ ನಾವು ಉಪಯೋಗ ಮಾಡುತ್ತಿದ್ದೇವೆ" ಎಂದರು.

ಇದನ್ನೂ ಓದಿ:ಹಸಿಕಸ, ಒಣಕಸ ಬೇರ್ಪಡಿಸದ ಮಂಗಳೂರಿನ ಅಪಾರ್ಟ್ಮೆಂಟ್​ಗೆ 53 ಸಾವಿರ ರೂ. ದಂಡ!

ABOUT THE AUTHOR

...view details