ಹುಬ್ಬಳ್ಳಿ:''ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿ ಅಸ್ತಿತ್ವಗೊಳ್ಳಲಿದೆ. ಈಗಾಗಲೇ ಈ ಬಗ್ಗೆ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ವಿಧಾನಸೌಧದಲ್ಲಿ ಬಸವತತ್ವದ ಆಡಳಿತ ಬಂದಾಗ ಮಾತ್ರ ರಾಜ್ಯದಲ್ಲಿ ಉತ್ತಮ ಆಡಳಿತ ಸಾಧ್ಯ'' ಎಂದು ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ''ನಮ್ಮ ತಾಯಿ ನಾಡು ಚೆನ್ನಾಗಿದ್ದರೆ, ದೇಶ ಚೆನ್ನಾಗಿರುತ್ತದೆ. ಒಬ್ಬ ರಾಷ್ಟ್ರದ ಪ್ರಧಾನಿ ಹಿಂದೂ, ಮುಸ್ಲಿಂ ಪ್ರತ್ಯೇಕ ಮಾಡಿ ರಾಜಕಾರಣ ಮಾಡುತ್ತಾರೆ. ಆದರೆ, ಹಿಂದಿನ ಪ್ರಧಾನಿಗಳು ಭಾರತವನ್ನು ಒಂದು ಗೂಡಿಸುವ ಮಾತು ಹೇಳತ್ತಾ ಇದ್ದರು. ಈ ಬಾರಿ ಬಿಜೆಪಿಯವರಿಗೆ ಲೋಕಸಭೆಯಲ್ಲಿ ಜನರು ತಕ್ಕಪಾಠ ಕಲಿಸತ್ತಾರೆ'' ಎಂದು ಹರಿಹಾಯ್ದರು.
''ಕರ್ನಾಟಕದಲ್ಲಿ ಕಾಂಗ್ರೆಸ್ ತಪ್ಪಿನಿಂದ ಬಿಜೆಪಿ ಬೆಳೆಯುತ್ತಿದೆ. ಇವತ್ತು ಬಸವತತ್ವದ ಆಧಾರದ ಮೇಲೆ ಸಂಘಟನೆ ಮಾಡಬೇಕಿದೆ. ಇದನ್ನೇ ನಾವು ತೀರ್ಮಾನ ಮಾಡಿದ್ದೇವೆ. ದಿಂಗಾಲೇಶ್ವರ ಶ್ರೀಗಳು ಈ ಬಗ್ಗೆ ಹೇಳಿಕೆಯನ್ನು ಕೊಡಲಿದ್ದಾರೆ'' ಎಂದರು. ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದು ದಿಂಗಾಲೇಶ್ವರ ಶ್ರೀಗಳು ಹೇಳುತ್ತಾರೆ ಎಂದು ಹೇಳುವ ಮೂಲಕ ಶ್ರೀಗಳ ಮುಂದಿನ ರಾಜಕೀಯ ನಡೆಯನ್ನು ಸಿಎಂ ಇಬ್ರಾಹಿಂ ತಿಳಿಸಿದರು.