ಕರ್ನಾಟಕ

karnataka

By ETV Bharat Karnataka Team

Published : Mar 25, 2024, 3:22 PM IST

ETV Bharat / state

ನಾನು ಸಂಪಾದಿಸಿದ ಆದಾಯದ ಲೆಕ್ಕ ಕೊಡಲು ಸಿದ್ಧ, ಡಾ. ಸುಧಾಕರ್ ಲೆಕ್ಕ ಕೊಡಲು ಸಿದ್ಧರಿದ್ದಾರಾ? : ಪ್ರದೀಪ್ ಈಶ್ವರ್ ಸವಾಲು - MLA PRADEEP ESHWAR

ನಾನು ಸಂಪಾದಿಸಿದ ಒಂದೊಂದು ಆದಾಯಕ್ಕೆ ಲೆಕ್ಕ ಕೊಡಲು ನಾನು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ತಿಳಿಸಿದರು.

pradeep-eshwar
ಪ್ರದೀಪ್ ಈಶ್ವರ್

ಬೆಂಗಳೂರು : ನಾನು ಸಂಪಾದಿಸಿದ ಒಂದೊಂದು ಆದಾಯಕ್ಕೆ ನಾನು ಲೆಕ್ಕ ಕೊಡಲು ಸಿದ್ಧನಿದ್ದೇನೆ. ತಾವು ಲೆಕ್ಕ ಇಡಲು ರೆಡಿ ಇದ್ದೀರಾ? ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ ಸುಧಾಕರ್​ಗೆ ಬಹಿರಂಗ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಬಿಜೆಪಿ ನಿನ್ನೆ ಬಿಡುಗಡೆ ಮಾಡಿದ ಅಭ್ಯರ್ಥಿ ಲಿಸ್ಟ್ ಹೆಸರು ನೋಡಿದಾಗಿನಿಂದ ಪ್ರಜಾಪ್ರಭುತ್ವ ಸಾಯುವುದಕ್ಕೆ ಮುನ್ನುಡಿ ಹಾಕಿದ್ದಾರೆ ಎಂದು ಅನ್ನಿಸಿತು. ಕೋವಿಡ್ ವೇಳೆ ಡಾ. ಕೆ ಸುಧಾಕರ್ ವಿರುದ್ಧ ನಾವು 2,200 ಕೋಟಿ ರೂ. ಅಕ್ರಮದ ಆರೋಪ ಮಾಡಿದ್ದೆವು. ಅವರದ್ದೇ ಪಕ್ಷದ ಶಾಸಕ ಯತ್ನಾಳ್ 40 ಸಾವಿರ ಕೋಟಿ ರೂ.‌ ಕೋವಿಡ್ ಅಕ್ರಮದ ಆರೋಪ ಮಾಡಿದ್ದರು. ಅಷ್ಟು ದೊಡ್ಡ ಆರೋಪ ಇದ್ದವರಿಗೆ ಟಿಕೆಟ್ ಏಕೆ ನೀಡಿತು?'' ಎಂದು ಪ್ರಶ್ನಿಸಿದರು.

''ಅವರ ವಿರುದ್ಧ ಕಳಂಕ ಆರೋಪ ಇದ್ದರೂ ಸಾಮಾನ್ಯ ವ್ಯಕ್ತಿ ಮೇಲೆ ಗೆಲ್ಲಲು ಸಾಧ್ಯವಾಗದ ವ್ಯಕ್ತಿಗೆ ಟಿಕೆಟ್ ಏಕೆ ನೀಡಿದರು?. ನಾನು ಸಂಪಾದಿಸಿದ ಒಂದೊಂದು ಆದಾಯಕ್ಕೆ ಲೆಕ್ಕ ಕೊಡಲು ನಾನು ಸಿದ್ಧನಿದ್ದೇನೆ. ನೀವು ಡಿಕ್ಲೇರ್ ಮಾಡಲು ರೆಡಿ ಇದ್ದೀರಾ?. ಸಂಸತ್ ಒಂದು ಪವಿತ್ರವಾದ ಸ್ಥಾನ. ವಿನಾಶಕಾರಿ ವ್ಯಕ್ತಿಯೊಬ್ಬ ಸಂಸತ್​ಗೆ ಹೋದರೆ ಹೇಗೆ?. ಅವರನ್ನು ಗೆಲ್ಲಲು ನಾವು ಬಿಡಲ್ಲ. ಕೇಂದ್ರ ಸರ್ಕಾರನೇ ಚಿಕ್ಕಬಳ್ಳಾಪುರಕ್ಕೆ ಬರಲಿ. ಸುಧಾಕರ್​ ಅವರನ್ನು ಸಂಸತ್ ಮೆಟ್ಟಿಲು ತುಳಿಯಲು ಬಿಡಲ್ಲ'' ಎಂದು ಗುಡುಗಿದರು.

''ರಾಜ್ಯದ ಕೆಲ ಬಿಜೆಪಿ ನಾಯಕರಿಗೆ ವಿವಿಧ ಯೋಗಾಸನಗಳ ಮೂಲಕ ಸಹಾಯ ಮಾಡಿದ್ದಾರೆ. ಅವರನ್ನು ಸಂಸತ್​ಗೆ ಕಳುಹಿಸಿದರೆ, ಕೇಂದ್ರ ಬಿಜೆಪಿ ನಾಯಕರಿಗೂ ಆಸನಗಳನ್ನು ಕಲಿಸುತ್ತಾರೆ. ರಾಜ್ಯದ ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಡಾ. ಕೆ ಸುಧಾಕರ್ ಸಹಾಯ ಮಾಡಿದ್ದಾರೆ.‌ ಸೂರ್ಯ ನಮಸ್ಕಾರ, ಕಪಾಲಬಾತಿ, ಶವಾಸನ, ದೀರ್ಘ ದಂಡ ನಮಸ್ಕಾರ ಮೂಲಕ ಸಹಾಯ ಮಾಡಿದ್ದಾರೆ'' ಎಂದು ಲೇವಡಿ ಮಾಡಿದರು.

''ಡಾ. ಕೆ ಸುಧಾಕರ್ ನನ್ನ ಮೇಲೆ 22 ಕೇಸ್ ಹಾಕಿದ್ದರು. ಕಾನೂನು ಸುವ್ಯವಸ್ಥೆ ಅವರದ್ದಾ?. ಇಂಥ ವ್ಯಕ್ತಿ ಗೆಲ್ಲಲ್ಲ. ಗೆಲ್ಲಬಾರದು. ಬೈ‌ ಮಿಸ್ಟೇಕ್ ಇವರೇನಾದರು ಸಂಸತ್​ಗೆ ಹೋದರೆ ಕೇಂದ್ರದ ನಾಯಕರಿಗೆ ಇವರು ಆಸನಗಳನ್ನು ಕಲಿಸುತ್ತಾರೆ. ಆತ್ಮ‌ ತೃಪ್ತಿಗೆ, ಆತ್ಮ ಸಂತೋಷಕ್ಕೆ ಕೆ. ಸುಧಾಕರ್ ಸಹಾಯ ಮಾಡುತ್ತಾರೆ. ಡಾ. ಕೆ ಸುಧಾಕರ್ ವಿಚಿತ್ರ ರಾಜಕಾರಣಿಯಾಗಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

''ನಮ್ಮ ಕಾಂಗ್ರೆಸ್ ಅಭ್ಯರ್ಥಿಗೆ ದಯವಿಟ್ಟು ಬೆಂಬಲಿಸಿ. ಡಾ. ಕೆ ಸುಧಾಕರ್ ಅವರು ಬಂದರೆ ಸಾಮಾನ್ಯ ಜನರಿಗೆ ಕಷ್ಟವಾಗುತ್ತೆ. ಸುಧಾಕರ್ ಬಗ್ಗೆ ಅವರ ಪಕ್ಷದಲ್ಲೇ ಅಸಮಾಧಾನ ಇದೆ.‌ ಪ್ರಜಾಪ್ರಭುತ್ವದಲ್ಲಿ ಸಹಿಸುವ ಶಕ್ತಿ ಇದ್ದರೆ ಸಾರ್ವಜನಿಕ ಜೀವನಕ್ಕೆ ಬರಬೇಕು. ಕಳೆದ ಐದು ವರ್ಷದಲ್ಲಿ ನನ್ನ ವ್ಯವಹಾರದ ಲೆಕ್ಕವನ್ನು ಕೊಡುತ್ತೇನೆ. ನನ್ನ ಪತ್ನಿ, ಸಂಬಂಧಿಕರ ಖಾತೆಯ ಲೆಕ್ಕ ಕೊಡುತ್ತೇನೆ. ನೀವು ನಿಮ್ಮ ಹಾಗೂ ನಿಮ್ಮ ಬಾವಮೈದನ ಖಾತೆಯಲ್ಲಿರುವ ಹಣದ ಲೆಕ್ಕ ಕೊಡುತ್ತೀರಾ?'' ಎಂದು ಪ್ರಶ್ನಿಸಿದರು.

''ಐಟಿ ಬಿಡಿಸ್ತೀರ, ಇಡಿ ಕಳುಹಿಸ್ತೀರಾ. ನಾನು ಸಿದ್ಧನಿದ್ದೇನೆ. ಐ ಡೋಂಟ್ ಕ್ಯಾರ್. ದೇವರ ಮುಂದೆ ನಾನು ಸ್ವಚ್ಛ ಎಂದು ಪ್ರಮಾಣ ಮಾಡಲು ರೆಡಿ ಇದ್ದೇನೆ. ನೀವು ಪ್ರಮಾಣ ಮಾಡಲು ಸಿದ್ಧನಿದ್ದಾರಾ?. ಸೆಲೆಬ್ರಿಟಿ ನೋಡಿ ಓಟು ಹಾಕುವ ಕಾಲ ಹೋಗಿದೆ. ಬಂದಿರುವ ಸೆಲೆಬ್ರಿಟಿಗಳು ಉಚಿತವಾಗಿ ಬರಬೇಕು. ಅವರಿಗೆ ಹಣ ಕೊಟ್ಟು ಕರೆಸಿ ಪ್ರಚಾರ ಮಾಡಿಸಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.‌

ಯಾರ ಯಾರ ಕಾಲಿಗೆ ಬಿದ್ದಿದ್ದೀರಿ ಗೊತ್ತು: ''ನೀವು ಕೋವಿಡ್ ಹಗರಣದ ತನಿಖೆಯಿಂದ ತಪ್ಪಿಸಲು ಯಾರ ಯಾರ ಕಾಲು ಬಿದ್ದು, ಕಣ್ಣೀರು ಹಾಕಿದ್ದೀರಿ ಎಂದು ನನಗೆ ಗೊತ್ತಿದೆ'' ಎಂದು ಆರೋಪಿಸಿದರು.

''ಮಾತನಾಡಿದರೆ ಸಿನಿಮಾ‌ ಡೈಲಾಗ್ ಹೇಳುತ್ತೀಯಾ ಅಂತಾರೆ. ಇದು ಡೈಲಾಗ್ ಅಲ್ಲ. ಇದು ಹೊಟ್ಟೆಯಲ್ಲಿ ಇರುವ ನೋವು, ಎದೆಯಲ್ಲಿರುವ ಬಾಧೆ. ಅವರ ಟಾರ್ಚರ್​ರಿಂದ ನಾನು ಶಾಸಕನಾದೆ. ಅವರ ಟಾರ್ಚರ್​ರಿಂದ ಆ ಧೈರ್ಯ ಬಂದಿದೆ. ಕೆ. ಸುಧಾಕರ್ ಕಾಂಗ್ರೆಸ್​ಗೆ ಅಪಾಯವಲ್ಲ. ಅವರು ಬಿಜೆಪಿಗೆ ಅಪಾಯವಾಗಿದ್ದಾರೆ. ಒಂದು ತಿಂಗಳು ನನಗೂ ಸುಧಾಕರ್​ಗೆ ನಾನ್ ಸ್ಟಾಪ್ ಯುದ್ಧ ನಡೆಯುತ್ತೆ'' ಎಂದು ತಿಳಿಸಿದರು.

ಇದನ್ನೂ ಓದಿ :ನನ್ನೆದೆ ಸೀಳಿದ್ರೆ ಶ್ರೀರಾಮ, ಸಿದ್ದರಾಮ ಇಬ್ಬರೂ ಇದ್ದಾರೆ: ಶಾಸಕ ಪ್ರದೀಪ್ ಈಶ್ವರ್

ABOUT THE AUTHOR

...view details