ದೆಹಲಿ/ಬೆಂಗಳೂರು: ಡಿ.4ಕ್ಕೆ ಹಾಸನದಲ್ಲಿ ಸಮಾವೇಶ ನಡೆಸುವ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಗ್ರೀನ್ ಸಿಗ್ನಲ್ ಸಿಕ್ಕಿದೆ. ಶುಕ್ರವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಹಾಸನ ಸಮಾವೇಶದ ಹಿನ್ನೆಲೆ ಬಗ್ಗೆ ವಿವರಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಸಮಾವೇಶ ನಡೆಸಿದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಅನುಕೂಲ ಎಂಬುದಾಗಿ ಮನವರಿಕೆ ಮಾಡಿದ್ದಾರೆ.
ಪಕ್ಷದ ಎಲ್ಲ ನಾಯಕರೂ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಪಕ್ಷ ಮತ್ತು ಹಿಂದುಳಿದ ವರ್ಗಳ ಒಕ್ಕೂಟದ ಅಡಿಯಲ್ಲಿ ಸಮಾವೇಶ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ತಿಳಿಸಿದ್ದಾರೆ. ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಿದ್ದರಾಮಯ್ಯ ಬೆಂಬಲಿಗರು, ಸಂಯುಕ್ತ ಶೋಷಿತ ವರ್ಗಗಳ ಒಕ್ಕೂಟ, ಅಹಿಂದ ನಾಯಕರು ಈ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಸಮಾವೇಶದ ಸಂಬಂಧ ಇರುವ ಗೊಂದಲ, ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಸಮಾವೇಶದ ಹಿನ್ನೆಲೆ ಬಗ್ಗೆ ವಿವರಿಸಿದ್ದಾರೆ.
ಅನಾಮಧೇಯ ಪತ್ರದ ಬಗ್ಗೆ ಸಿಎಂ ಹೇಳಿದ್ದೇನು?:ಸ್ವಾಭಿಮಾನಿ ಸಮಾವೇಶ ಕುರಿತಂತೆ ಹೈಕಮಾಂಡ್ಗೆ ಅನಾಮಧೇಯ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ಬಗ್ಗೆ ನನ್ನ ಬಳಿ ಚರ್ಚೆ ಮಾಡಲಿಲ್ಲ. ಸಮಾವೇಶದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಹೇಳಿದ್ದೇನೆ, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದೇನೆ. ಈ ಸಮಾವೇಶವನ್ನು ನಾವು ಮಾಡುತ್ತಿಲ್ಲ, ಹಿಂದುಳಿದ ವರ್ಗಗಳ ಒಕ್ಕೂಟ ಸಮಾವೇಶ ಮಾಡುತ್ತಿದೆ, ಅವರೊಂದಿಗೆ ನಾವು ಸೇರಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಆದರೆ, ಸಮಾವೇಶವನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ನನಗೆ ಮೊದಲೇ ತಿಳಿಸಿದ್ದಾರೆ. ಮಿಕ್ಕ ವಿಚಾರಗಳು ನನಗೆ ಗೊತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿ ಮಾಡಿ ಮೂರ್ನಾಲ್ಕು ದಿನಗಳಾಗಿವೆ. ಪಕ್ಷದ ಭಾಗವಹಿಸುವಿಕೆ ಖಂಡಿತ ಇದ್ದೇ ಇರುತ್ತದೆ ಎಂದಿದ್ದಾರೆ.
ಮತ್ತೊಂದೆಡೆ, ಹಾವೇರಿಯಲ್ಲಿ ಸಚಿವ ಸತೀಶ್ ಜರಕಿಹೊಳಿ ಮಾತನಾಡಿ, ಎಲ್ಲಿದೆ ಪತ್ರ? ಯಾರಿಗೆ ಬರೆದರು? ಯಾಕೆ ಬರೆದರು? ಏನು ಆ್ಯಕ್ಷನ್ ತಗೊಂಡ್ರು ಎಂಬುದು ಬೇಕಲ್ವಾ? ಸುಮ್ಮನೇ ವಾಟ್ಸ್ಆ್ಯಪ್ನಲ್ಲಿ ಒಂದು ಪತ್ರ ಬಂದರೆ ಅದು ಇಡೀ ಪಕ್ಷದ ನಿರ್ಧಾರ ಆಗಲ್ಲ ಎಂದು ಹೇಳಿದ್ದಾರೆ.