ಕರ್ನಾಟಕ

karnataka

ETV Bharat / state

ಬೆಳಗಾವಿ, ಚಿಕ್ಕೋಡಿಯಲ್ಲಿ ಸಚಿವರ ಮಕ್ಕಳಿಗೆ ಮಣೆ: ಬಿಜೆಪಿ ಹಿರಿಯರ ವಿರುದ್ಧ ಅಖಾಡಕ್ಕೆ ಧುಮುಕಿದ ಕಿರಿಯರು - Lok Sabha Election

ಚಿಕ್ಕೋಡಿ ಕ್ಷೇತ್ರದಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಿದರೆ, ಬೆಳಗಾವಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೆ ಕಾಂಗ್ರೆಸ್​ ಟಿಕೆಟ್ ಘೋಷಣೆ ಆಗಿದೆ.

ಸಚಿವರ ಮಕ್ಕಳಿಗೆ ಮಣೆ
ಸಚಿವರ ಮಕ್ಕಳಿಗೆ ಮಣೆ

By ETV Bharat Karnataka Team

Published : Mar 22, 2024, 6:28 PM IST

Updated : Mar 22, 2024, 9:14 PM IST

ಬೆಳಗಾವಿ:ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್​ ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದೆ. ನಿನ್ನೆ ಬಿಡುಗಡೆಗೊಂಡ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೆ ಬೆಳಗಾವಿ ಟಿಕೆಟ್ ಘೋಷಣೆ ಆಗಿದೆ. ಇಬ್ಬರಿಗೂ ಕೂಡ ಇದು ಮೊದಲ ಚುನಾವಣೆ. ಆದರೆ, ರಾಜಕೀಯ ಹಿನ್ನೆಲೆ ಮತ್ತು ಸಚಿವರ ಮಕ್ಕಳಾಗಿರುವುದರಿಂದ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಗೆಲ್ಲುವ ಏಕೈಕ ಮಾನದಂಡ ಆಧರಿಸಿ‌ ಟಿಕೆಟ್:ಬಿಜೆಪಿ ಭದ್ರಕೋಟೆ ಆಗಿರುವ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳನ್ನು ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ರಣತಂತ್ರ ರೂಪಿಸಿದೆ. ಅಲ್ಲದೇ ಟಿಕೆಟ್ ಆಕಾಂಕ್ಷಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗೆಲ್ಲುವ ಏಕೈಕ ಮಾನದಂಡ ಆಧರಿಸಿ‌ ಇಬ್ಬರು ಪ್ರಭಾವಿ ಸಚಿವರ ಮಕ್ಕಳಿಗೆ ಮಣೆ ಹಾಕಲಾಗಿದೆ. ಬೇರೆಯವರಿಗೆ ಟಿಕೆಟ್ ನೀಡಿದರೆ ಚುನಾವಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ಕಾರಣಕ್ಕೆ ಹೈಕಮಾಂಡ್ ಅವರ ಮಕ್ಕಳಿಗೆ ಟಿಕೆಟ್ ಕೊಟ್ಟು ಗೆಲುವಿನ ಜವಾಬ್ದಾರಿ ಅವರಿಗೆ ವಹಿಸಿದೆ.

ಅಣ್ಣಾಸಾಹೇಬ ಜೊಲ್ಲೆ

ಇನ್ನು ಬಿಜೆಪಿ ಈಗಾಗಲೇ ಚಿಕ್ಕೋಡಿ ಕ್ಷೇತ್ರದಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಮತ್ತೆ ಕಣಕ್ಕಿಳಿಸಿದೆ. ಬೆಳಗಾವಿ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್​​ಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಎರಡೂ ಕ್ಷೇತ್ರಗಳಲ್ಲೂ ಸಚಿವರ ಮಕ್ಕಳೇ ಕಣಕ್ಕೆ ಇಳಿಯುತ್ತಿರುವುದರಿಂದ ಸಚಿವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಟಿಕೆಟ್ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ್ದಾರೆ.

ಜಗದೀಶ ಶೆಟ್ಟರ್​​

ಹಿರಿ ತಲೆಗಳ‌ ಮುಂದೆ ಕಿರಿ ತಲೆಗಳು:ಬೆಳಗಾವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ವಿರುದ್ಧ ಯುವ ನಾಯಕ ಮೃಣಾಲ್ ಇದೇ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ. ಇನ್ನು ಚಿಕ್ಕೋಡಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸುತ್ತಿದ್ದು, ಅಂತಿಮವಾಗಿ ಮತದಾರ ಪ್ರಭುಗಳು ಯಾರಿಗೆ ಮಣೆ ಹಾಕುತ್ತಾರೆ ಕಾದು ನೋಡಬೇಕಿದೆ.

ಕೈ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಸಿವಿಲ್ ಇಂಜಿನಿಯರ್:ಕುಂದಾನಗರಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ (ಸಿವಿಲ್) ಅವರು ಎಂಜಿನಿಯರಿಂಗ್ ಪದವಿ ಓದಿ ಮುಗಿಸಿದ್ದಾರೆ. 6-4-1993ರಲ್ಲಿ ಜನಿಸಿರುವ ಮೃಣಾಲ್ ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ನಿವಾಸಿ. ತಂದೆ ರವೀಂದ್ರ, ತಾಯಿ ಲಕ್ಷ್ಮಿ ‌ಹೆಬ್ಬಾಳ್ಕರ್ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಕೆಲಸ ಮಾಡುತ್ತಿದ್ದಾರೆ.

ಮೃಣಾಲ್‌ ಹೆಬ್ಬಾಳ್ಕರ್

ಮೃಣಾಲ್ 2013ರಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಎರಡು ಅವಧಿಗೆ ಕಾಂಗ್ರೆಸ್ ಯುವ ಘಟಕದ ಬೆಳಗಾವಿ ಉಪಾಧ್ಯಕ್ಷರಾಗಿ ‌ಕಾರ್ಯನಿರ್ವಹಿಸಿದ್ದಾರೆ. ಮೃಣಾಲ್‌ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ, ಸವದತ್ತಿಯ ಹರ್ಷಾ ಶುಗರ್ಸ್‌ ನಿರ್ದೇಶಕರಾಗಿ, ಲಕ್ಷ್ಮಿತಾಯಿ ಸೌಹಾರ್ದ ಸಹಕಾರ ‌ನಿಯಮಿತದ ನಿರ್ದೇಶಕರಾಗಿ, ಹರ್ಷಾ ಬಿಲ್ಡರ್ ಹಾಗೂ ಡೆವೆಲಪರ್‌ ಪಾರ್ಟನರ್ ಕೂಡ ಆಗಿದ್ದಾರೆ‌. ಸದ್ಯ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಅನುಪಸ್ಥಿತಿಯಲ್ಲಿ ಹೆಚ್ಚು ಓಡಾಟ ನಡೆಸುವ ಮೂಲಕ ಚಿರಪರಿಚಿತರಾಗಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿ‌ ಎಂಬಿಎ ಪದವೀಧರೆ:ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ‌ ಆಗಿರುವ ಪ್ರಿಯಾಂಕಾ ಜಾರಕಿಹೊಳಿ ಎಂಬಿಎ ಪದವೀಧರೆಯಾಗಿದ್ದು ತಂದೆಯ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ‌ ಫೌಂಡೇಶನ್ ವತಿಯಿಂದ ಯಮಕನಮರಡಿ ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿ‌

ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿ ಆಗಿರುವ ಪ್ರಿಯಾಂಕ ಅವರು 16-04-1997ರಂದು ಜನಿಸಿದ್ದು, ತಂದೆ ಸತೀಶ್​ ಜಾರಕೊಹೊಳಿ ಬೆಳಗಾವಿ ಉಸ್ತುವಾರಿ ಸಚಿವರು ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶಾಕುಂತಲಾ ದೇವಿ, ಸಹೋದರ ರಾಹುಲ್ ಜಾರಕಿಹೊಳಿ ಕೂಡ ಸಕ್ರಿಯ ರಾಜಕಾರಣದಲ್ಲಿದ್ದಾರೆ. ರಾಜಕೀಯ ಹಿನ್ನೆಲೆ ನೋಡುವುದಾದರೆ 2018ರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿರುವ ಪ್ರಿಯಾಂಕಾ, ತಂದೆ ಸತೀಶ ಜಾರಕಿಹೊಳಿ‌ ಅವರ ಯಮಕನಮರಡಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ಪಡೆದಿಲ್ಲ‌. ಆದರೆ ಸತೀಶ್​ ಶುಗರ್ ಲಿಮಿಟೆಡ್, ಬೆಲಗಾಮ್ ಶುಗರ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಘಾಟ್ಸ್ ಇನ್ಫ್ರಾ ಲಿಮಿಟೆಡ್, ನೇಚರ್ ನೆಸ್ಟ್ ಹಾರ್ಟಿಕಲ್ಚರ್ ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ, ಪಾಟ್ನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಎರಡು ಪ್ರಭಾವಿ ರಾಜಕೀಯ ಮನೆತನಗಳ ಪ್ರತಿಷ್ಠಿತ ಫೈಟ್​ಗೆ ಚಿಕ್ಕೋಡಿ ಲೋಕಸಭಾ ಅಖಾಡ ಸಜ್ಜು - Lok Sabha election

Last Updated : Mar 22, 2024, 9:14 PM IST

ABOUT THE AUTHOR

...view details