ಹಾಸನ:ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದರು. ''ಒಡೆದು ಆಳುವ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ಗೆ ಒಟ್ಟುಗೂಡಿಸಿ ಅಭ್ಯಾಸನೇ ಇಲ್ಲ'' ಎಂದು ತಿರುಗೇಟು ನೀಡಿದರು.
ಹಾಸನ ನಗರದಲ್ಲಿ ಮಾತನಾಡಿದ ಅವರು, ''ರಾಹುಲ್ ಗಾಂಧಿ ಅವರ ಯಾತ್ರೆಗೆ ‘ಭಾರತ್ ಜೋಡೊ ಯಾತ್ರೆ’ ಅಂತ ಇಟ್ಟಿದ್ದಾರೆ. ಜೋಡೊ ಅಂತ ಹೇಳ್ತಾ ದೇಶ ಒಡೆಯುವ ಬಗ್ಗೆ ಮಾತನಾಡುವುದು ಎಷ್ಟು ಸರಿ? ರಾಷ್ಟ್ರ ಒಡೆಯುವ ಮಾತನ್ನು ಡಿ.ಕೆ. ಸುರೇಶ್ ಹೇಳಿದರೆ, ಜಾತಿ- ಜಾತಿ ಒಡೆಯುವ ರಾಜಕಾರಣವನ್ನು ಸಿದ್ದರಾಮಯ್ಯ ಆದಿಯಾಗಿ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರು ಅಪರೂಪಕ್ಕೊಮ್ಮೆ ಮನುಷ್ಯತ್ವ ಇರಬೇಕು ಅಂತಾರೆ. ಆದರೆ, ಇವರು ಮಾಡೋದೆಲ್ಲಾ ಜಾತಿ ರಾಜಕಾರಣ'' ಎಂದು ಆರೋಪಿಸಿದರು.
''ಬಡವರು ಎಲ್ಲಾ ಜಾತಿಯಲ್ಲೂ ಇದ್ದಾರೆ. ಯಾಕೆ ಅವರು ಬಡವರ ಪರ ಯೋಚನೆ ಮಾಡಲ್ಲ. ಬಡವರ ಪರವಾಗಿ ಏಕೆ ಮಾತನಾಡಲ್ಲ? ಜಾತಿಯನ್ನೇ ಇಟ್ಕಂಡು ಏಕೆ ಮಾತಾನಾಡುತ್ತಾರೆ ಎಂದು ಪ್ರಶ್ನಿಸಬೇಕು. ಎಲ್ಲಾ ಜಾತಿಯಲ್ಲೂ ಒಳ್ಳೆವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಹಾಗಾದರೆ ಜಾತಿ ದ್ವೇಷ ಯಾಕೆ? ಜಾತಿ ಒಡೆದು ರಾಜಕಾರಣ ಮಾಡೋದು, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡೋದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಆ ಕಾಂಗ್ರೆಸ್ ಸಂಸ್ಕೃತಿಯನ್ನೇ ಡಿ.ಕೆ. ಸುರೇಶ್ ಹೇಳಿದ್ದಾರೆ'' ಎಂದು ಹರಿಹಾಯ್ದರು.