ಬೆಂಗಳೂರು:"ಲೋಕಸಭೆ ಚುನಾವಣೆ ನಡೆದ ಬಳಿಕಮೂರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಆ ನಂತರ ಜನಪರವಾದ ಆಡಳಿತ ನಡೆಸುವ ಸರ್ಕಾರ ಬರುತ್ತದೆ" ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಭವಿಷ್ಯ ನುಡಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬನ್ನಪ್ಪ ಪಾರ್ಕ್ನಲ್ಲಿ ಇಂದು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ರಾಜ್ಯದ 28 ಕ್ಷೇತ್ರಗಳ ಪೈಕಿ 28 ಅನ್ನೂ ಗೆಲ್ಲಲಿದೆ. ಕಾಂಗ್ರೆಸ್ ಮಿತ್ರರು ಗ್ಯಾರಂಟಿ ಕೊಟ್ಟು ಜನರ ತಲೆ ಕೆಡಿಸುವ ಕೆಲಸ ಮಾಡಿದ್ದಾರೆ. ಮೋದಿ ಗ್ಯಾರಂಟಿ ವ್ಯಕ್ತಿಯ ಜೀವನ ಬದಲಾಯಿಸುತ್ತದೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಬರೀ ಚುನಾವಣೆಗೆ ಮಾತ್ರ ಬಂದಿರುವ ಗ್ಯಾರಂಟಿ ಎಂದು ಲೇವಡಿ ಮಾಡಿದರು.
"ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣ ಅತ್ಯಂತ ಉತ್ಕೃಷ್ಟವಾದ ವಿಮಾನ ನಿಲ್ದಾಣ. ಬೆಂಗಳೂರಿಗೆ ಸಬ್ ಅರ್ಬನ್ ರೈಲ್ವೆ ಆಗುತ್ತಿದ್ದರೆ ಅದಕ್ಕೆ ಮೋದಿ ಸರ್ಕಾರ ಕಾರಣ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬುದ್ಧಿ ಕಲಿಸದಿದ್ದರೆ ಕುಡಿಯಲು ನೀರೂ ಸಹ ಕೊಡಲ್ಲ. ದೇಶದಲ್ಲಿ ಮೋದಿ ಅವರು ತಮ್ಮ 10 ವರ್ಷದ ಅವಧಿಯಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದಾರೆ. ಅವರ ಮಂತ್ರಿ ಮಂಡಲದಲ್ಲಿಯೂ ಯಾವುದೇ ಭ್ರಷ್ಟಾಚಾರದ ಆಡಳಿತ ಇಲ್ಲ. ಇನ್ನೂ ಐದು ವರ್ಷಗಳ ಕಾಲ ಅವರು ಪ್ರಧಾನಿ ಆಗಬೇಕು" ಎಂದರು.
ನಟಿ ಶೃತಿ ಮಾತನಾಡಿ, "ನಾನೊಬ್ಬಳು ಭಾರತೀಯಳು ಎನ್ನುವ ಹೆಮ್ಮೆ ಇದೆ. ಅಷ್ಟೇ ಹೆಮ್ಮೆ ಭಾರತೀಯ ಜನತಾ ಪಕ್ಷದ ಸದಸ್ಯೆ ಅನ್ನೋದಕ್ಕೆ ಇದೆ. ನಾನು ಬಿಜೆಪಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಬರುತ್ತೇನೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅಂತಿದೆ. ಪ್ರತೀ ಯಶಸ್ವಿ ಮಹಿಳೆಯ ಹಿಂದೆ, ಬಿಜೆಪಿ ಯೋಜನೆಯೂ ಇದೆ ಅನ್ನೋದನ್ನು ನಾನು ಹೇಳ್ತೀನಿ. ಈ ಬಾರಿ ಕಾಂಗ್ರೆಸ್ ಪಕ್ಷ ಮಹಿಳೆಯರ ಮತ ಹೋಗಬಾರದು ಅಂತ ಎಲ್ಲರಿಗೂ ಉಚಿತ ಯೋಜನೆ ಘೋಷಣೆ ಮಾಡಿದೆ. ಬರೀ ಉಚಿತಗಳನ್ನು ಕೊಟ್ಟ ಮಾತ್ರಕ್ಕೆ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯವಿಲ್ಲ" ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, "ಈ ಚುನಾವಣೆ ರಾಷ್ಟ್ರ ಹಿತದ ಚುನಾವಣೆ. ದೇಶ ಭಕ್ತರ ರಕ್ಷಣೆ ಮಾಡುವ ಚುನಾವಣೆ. 2023ರ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿ ಗೆದ್ದಾಗ, ಸಿಹಿ ಹಂಚಿಲ್ಲ, ಪಟಾಕಿ ಹೊಡೀಲಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ್ದಾರೆ. ನಜೀರ್ ಹುಸೇನ್ ಗೆಲುವು ಸಂಭ್ರಮಿಸಿದವರು ಭಾರತ್ ಮಾತಾ ಕೀ ಜೈ ಅಂದಿಲ್ಲ. ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಆರ್.ಅಶೋಕ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಜನಾರ್ದನ ರೆಡ್ಡಿ, ನಟಿ ತಾರಾ, ಸಪ್ತಗಿರಿ ಗೌಡ, ಜೆಡಿಎಸ್ ಮಾಜಿ ಎಂಎಲ್‌ಸಿ ರಮೇಶ್ ಗೌಡ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.
ಇದನ್ನೂಓದಿ:ನಾಳೆ ಚನ್ನಪಟ್ಟಣಕ್ಕೆ ಅಮಿತ್ ಶಾ: ಏ.4ಕ್ಕೆ ನಾಮಪತ್ರ ಸಲ್ಲಿಸುವೆ: ಡಾ. ಸಿ.ಎನ್ ಮಂಜುನಾಥ್ - Dr C N Manjunath