ಬೆಂಗಳೂರು:ಒಬಿಸಿ ಕೋಟಾಕ್ಕೆ ಮುಸ್ಲಿಮರನ್ನು ಸೇರಿಸುವ ಮೂಲಕ ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕಿದ್ದ ದೊಡ್ಡ ಪಾಲನ್ನು ಕಿತ್ತುಕೊಳ್ಳಲಾಗಿದೆ. ಈ ವಿಧಾನವನ್ನು ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್ ನಿಯೋಗ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಮೋದಿ ವಿರುದ್ದ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ನರೇಂದ್ರ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದಾಗ ಈ ರೀತಿ ಮಾತನಾಡಿದ್ದಾರೆ. ದೇಶದ ಆಸ್ತಿ ಸರ್ವೇ ಮಾಡುತ್ತಾರೆ ಎಂದು ಮಾತನಾಡಿದ್ದಾರೆ. ಸಾವನ್ನಪ್ಪಿದ ಮೇಲೆ ಅವರ ಆಸ್ತಿಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. ದಲಿತರ ಮೀಸಲಾತಿಯನ್ನು ಕಡಿತ ಮಾಡಿ ಮುಸ್ಲಿಮರಿಗೆ ಕೊಡುತ್ತಾರೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಆಧಾರದ ಮೇಲೆ ನಾವು ಮೀಸಲಾತಿ ಕೊಟ್ಟಿದ್ದೇವೆ. ಸಂವಿಧಾನದ ವಿರುದ್ಧ ನಾವು ಯಾವುದು ಮಾಡಿಲ್ಲ. ಯಾರ ಆಸ್ತಿಯನ್ನೂ ಸರ್ವೇ ಮಾಡಲು ನಾವು ಪ್ರಣಾಳಿಕೆಯಲ್ಲಿ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕು. ಅಲ್ಲದೇ ಅವರನ್ನು ಚುನಾವಣಾ ಪ್ರಚಾರದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.