ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪರಿಷತ್ ಚುನಾವಣೆ ಕಾವು ಪಡೆದಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕಾಂಗ್ರೆಸ್ ಈಗಾಗಲೇ ತನ್ನ ಆರು ಅಭ್ಯರ್ಥಿಗಳನ್ನು ಘೋಷಿಸಿದೆ. ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಜೂನ್ 3ರಂದು ಈಶಾನ್ಯ ಪದವೀಧರ, ನೈಋತ್ಯ ಪದವೀಧರ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಾಗೂ ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಮೇ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮೇ 16 ಆಗಿದೆ. ನಾಮಪತ್ರ ಪರಿಶೀಲನೆ ಮೇ 17ಕ್ಕೆ ನಡೆಯಲಿದೆ. ಮೇ 20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಮತ ಎಣಿಕೆ ನಡೆಯಲಿದೆ.
ಆರೂ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳಿಂದ ಪ್ರಚಾರ:ಕಾಂಗ್ರೆಸ್ ಪಕ್ಷ ಮೇಲ್ಮನೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಐವರು ಕೈ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದರು. ಅದರಂತೆ ಕಾಂಗ್ರೆಸ್ ನಿಂದ ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ. ಚಂದ್ರಶೇಖರ್ ಪಾಟೀಲ್, ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ, ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿಗೌಡ, ಆಗ್ನೇಯ ಶಿಕ್ಷಕ ಕ್ಷೇತ್ರದಿಂದ ಕೆ. ಬಿ. ಶ್ರೀನಿವಾಸ್, ನೈಋತ್ಯ ಶಿಕ್ಷಕ ಕ್ಷೇತ್ರದಿಂದ ಕೆ.ಕೆ.ಮಂಜುನಾಥ್ ಹೆಸರು ಘೋಷಿಸಲಾಗಿದೆ. ಇನ್ನು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಬ್ಬಿರುವ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮರಿತಿಬ್ಬೇಗೌಡ ಅಭ್ಯರ್ಥಿಯಾಗಿರಲಿದ್ದಾರೆ. ಹೀಗಾಗಿ ಕೈ ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿ, ಬಿಜೆಪಿ-ಜೆಡಿಎಸ್ ನಿಂದ ಒಂದು ಹೆಜ್ಜೆ ಮುಂದಿದ್ದಾರೆ.
ಕೈ ಅಭ್ಯರ್ಥಿಯಾಗಿ ಆಯನೂರು: ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ ಕಣದಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಆಯನೂರು ಮಂಜುನಾಥ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರು. ಆಯನೂರು ಮಂಜುನಾಥ್ ರಾಜೀನಾಮೆ ಕೊಟ್ಟ ಕಾರಣ ತೆರವಾಗಿದ್ದ ಸ್ಥಾನಕ್ಕೆ ಈಗ ಚುನಾವಣೆ ಘೋಷಿಸಲಾಗಿದೆ. ಆಯನೂರು 2018ರಿಂದ ನೈರುತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅವರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ರಾಮೋಜಿಗೌಡ ಮತ್ತೆ ಅದೃಷ್ಟ ಪರೀಕ್ಷೆ: ಕಾಂಗ್ರೆಸ್ ನ ಹಿರಿಯ ಮುಖಂಡ ರಾಮೋಜಿಗೌಡ ಇದೀಗ ಬೆಂಗಳೂರು ಪದವೀಧರ ಕ್ಷೇತ್ರದಿಂದ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2012 ಮತ್ತು 2018ರ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದರು. ಬೆಂಗಳೂರು ನಗರ ಜಿಲ್ಲಾ ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಾ. ರಾಮೋಜಿ ಗೌಡರವರು ಹಲವಾರು ವರ್ಷಗಳಿಂದ ಶಿಕ್ಷಕರು ಹಾಗೂ ಪದವೀಧರರ ನಾಯಕರಾಗಿ ಗುರುತಿಸಿಕೊಂಡವರು. ಈಗಾಗಲೇ ಅವರು ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.