ಪ್ರಭಾ ಮಲ್ಲಿಕಾರ್ಜುನ್ (ETV Bharat) ದಾವಣಗೆರೆ:ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಮತ ಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಸೋಲನುಭವಿಸಿದ್ದಾರೆ.
ಈ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಪ್ರಭಾ ಮಲ್ಲಿಕಾರ್ಜುನ್, "ತುಂಬಾ ಸಂತೋಷವಾಗುತ್ತಿದೆ. ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ ದಾವಣಗೆರೆ ಕ್ಷೇತ್ರದ ಎಲ್ಲಾ ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು ಮತ್ತು ಶಾಮನೂರು ಶಿವಶಂಕರಪ್ಪನವರು, ಮಲ್ಲಿಕಾರ್ಜುನ್ ಅವರು ಹಾಗೂ ನಮ್ಮ ಕುಟುಂಬದ ಅಭಿಮಾನಿಗಳು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಒಂದೂವರೆ ತಿಂಗಳಿನಿಂದ ಬಿಸಿಲಿನಲ್ಲಿ ಓಡಾಡಿದ್ದಾರೆ. ಅದರ ಪ್ರತಿಫಲದಿಂದ ಕಾಂಗ್ರೆಸ್ ಪಕ್ಷ ಗೆದ್ದಿದೆ" ಎಂದು ಸಂತಸ ವ್ಯಕ್ತಪಡಿಸಿದರು.
"ನನ್ನ ಗೆಲುವಿಗೆ ಸಾಕಷ್ಟು ಕಾರಣಗಳಿವೆ. ಗ್ಯಾರಂಟಿ ಯೋಜನೆಗಳು ಮತ್ತು ನಮ್ಮೆಲ್ಲರ ಪ್ರಯತ್ನ ಹಾಗೂ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಹೀಗಾಗಿ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಇದೊಂದು ಕಠಿಣ ಸ್ಪರ್ಧೆಯಾಗಿತ್ತು. ಎಲ್ಲರೂ ಸೇರಿ ದಾವಣಗೆರೆಯಲ್ಲಿ ಅಭಿವೃದ್ಧಿಪರ್ವ ತರೋಣ" ಎಂದು ಹೇಳಿದರು.
ಪತ್ನಿಯ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, "ನಮ್ಮ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಎಲ್ಲಾ ಶಾಸಕರಿಗೆ ಧನ್ಯವಾದಗಳು. ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿತ್ತು. ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಎಲ್ಲಾ ಸಮುದಾಯದ ಜನ ನಮ್ಮ ಕೈ ಹಿಡಿದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಚುನಾವಣೋತ್ತರ ಸಮೀಕ್ಷೆ ಸುಳ್ಳಾಗಿದೆ. ಸಮೀಕ್ಷೆಯಲ್ಲಿ ನಾವು ಸೋಲುತ್ತೇವೆ ಎಂಬುದಾಗಿ ತೋರಿಸಿದ್ದರು. ಈ ಹಿಂದೆ ಜಿ.ಎಂ.ಸಿದ್ದೇಶ್ವರ್ ಅವರು ಮೋದಿ ಅಲೆಯಲ್ಲಿ ಗೆದ್ದಿದ್ದರು" ಎಂದರು.
ಇದನ್ನೂ ಓದಿ:26 ವರ್ಷಗಳ ಬಳಿಕ ಕಾಂಗ್ರೆಸ್ ಬಾಯಿಗೆ ಬೆಣ್ಣೆ: ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು - Congress Prabha Mallikarjun won