ಹಾವೇರಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ 8ರಂದು ಪ್ರಕಟಿಸಿದೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದಸ್ವಾಮಿ ಗಡ್ಡದೇವರಮಠ ಆಯ್ಕೆ ಆಗಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ತಮ್ಮ ಹೆಸರು ಬಿಡುಗಡೆ ಆಗಿದ್ದಕ್ಕೆ ಆನಂದ್ ಗಡ್ಡದದೇವರಮಠ ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾತನಾಡಿದ ಆನಂದ್ ಗಡ್ಡದೇವರಮಠ, ಮುಂದಿನ ಮಹತ್ವದ ಚುನಾವರಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಿ ತಮ್ಮನ್ನು ಘೋಷಣೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಅವರನ್ನು ಒಳಗೊಂಡಿರುವ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಬಂದಿದ್ದಕ್ಕೆ ಖುಷಿ ಆಗಿದೆ. ಪಕ್ಷದ ವರಿಷ್ಠರಿಗೆ ಧನ್ಯವಾದ ಎಂದು ಹೇಳಿದರು.
''ನಾನು ಗದಗ ಜಿಲ್ಲೆಯವನಾಗಿದ್ದು, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಹೊಸಬನಲ್ಲ. ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದು ಏಕೆ ಹೇಳುತ್ತೀರಿ. ಬಿಜೆಪಿ ಭದ್ರಕೋಟೆ ಆಗಿತ್ತು ಎಂಬ ಅಭಿಪ್ರಾಯವನ್ನು ಇಲ್ಲಿ ವ್ಯಕ್ತಪಡಿಸುವುದು ಬೇಡ. ಈ ಬಾರಿ ಹಾವೇರಿ ಬಿಜೆಪಿ ಭದ್ರಕೋಟೆ ಆಗಿರುತ್ತೋ ಇಲ್ಲವೋ ಎಂಬುದನ್ನು ನೀವೇ ನೋಡಿ ಎಂದು ತಿಳಿಸಿದರು.
ಜೊತೆಗೆ ಹಾವೇರಿ ನಗರ ನೀರಿನ ಸಮಸ್ಯೆ ಎದುರಿಸುತ್ತಿದೆ. ರೈಲ್ವೆ ಕಾಮಗಾರಿ ಅಪೂರ್ಣ ಆಗಿದೆ. ತುಂಗಾ ಮೇಲ್ದಂಡೆ ಯೋಜನೆ ಅಪೂರ್ಣ ಆಗಿದೆ ಎಂದ ಅವರು, ಮನೆ ಮನೆಗೂ ಗ್ಯಾರಂಟಿ ಮುಟ್ಟಿಸಿದ್ದೇವೆ. ನಮಗೆ ಗೆಲ್ಲುವ ವಿಶ್ವಾಸ ಇದೆ. ಮಾತನಾಡುವವರಿಗೆ ಸಾವಿರ ಇದೆ. ಆದರೆ, ನಾನು ಇಲ್ಲಿ ವಿಜಯಶಾಲಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.