ಘಟನೆ ಬಗ್ಗೆ ಸಚಿವ ಸಂತೋಷ್ ಲಾಡ್ ಮಾಹಿತಿ (ETV Bharat) ಹುಬ್ಬಳ್ಳಿ:ಫ್ಲೈಓವರ್ ಕಾಮಗಾರಿಯ ಸಂದರ್ಭದಲ್ಲಿ ಫ್ಲೈಓವರ್ ಮೇಲಿಂದ ರಾಡ್ ಬಿದ್ದು ಎಎಸ್ಐ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲೈ ಓವರ್ ಕಾಮಗಾರಿಯ ಝಂಡು ಕನ್ಸ್ಟ್ರಕ್ಷನ್ ಎಂಡಿ ಸೇರಿ 16 ಜನರ ವಿರುದ್ಧ ದೂರು ದಾಖಲಾಗಿದೆ.
ಮಹಾರಾಷ್ಟ್ರ ಮೂಲದ ಝಂಡು ಕನ್ಸ್ಟ್ರಕ್ಷನ್ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಮಂಗಳವಾರ ಸಂಜೆ 4 ಗಂಟೆಗೆ ಕೋರ್ಟ್ ವೃತ್ತದಲ್ಲಿ ಫ್ಲೈ ಓವರ್ ಕಾಮಗಾರಿಯ ರಾಡ್ ಎಎಸ್ಐ ನಾಭಿರಾಜ್ ದಯಣ್ಣವರ ಮೇಲೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆ ನಾಭಿರಾಜ್ ಸಂಬಂಧಿಕರು ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸುಮಾರು 320 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದ ಆರೋಪ ಕೇಳಿ ಬಂದಿತ್ತು. ಸದ್ಯ ಸಂಬಂಧಿಕರ ದೂರಿನನ್ವಯ ಕಂಪನಿಯ ಎಂಡಿ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಗ್ಯ ವಿಚಾರಿಸಿದ ಸಚಿವ ಸಂತೋಷ್ ಲಾಡ್:ವಿಷಯ ತಿಳಿಯುತ್ತಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಸ್ಪತ್ರೆಗೆ ಭೇಟಿ ನೀಡಿ ನಾಭಿರಾಜ್ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, 'ನಮ್ಮ ಉಪನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿದ್ದ ದಯಣ್ಣ ಅವರ ತಲೆ ಮೇಲೆ ಫ್ಲೈ ಓವರ್ ಕಾಮಗಾರಿ ವೇಳೆ ರಾಡ್ ತಲೆ ಮೇಲೆ ಬಿದ್ದಿದೆ. ತುಂಬಾ ಗಂಭೀರ ಗಾಯ ಆಗಿದೆ. ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ. 59 ವರ್ಷದ ಅವರು ಬಹಳ ವರ್ಷದಿಂದ ಅವರು ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು. ಆದಷ್ಟು ಬೇಗ ಗುಣಮುಖರಾಗುತ್ತಾರೆ ಅಂತ ಭಾವಿಸುತ್ತೇನೆ'.
'ಸೈಟ್ನಲ್ಲಿ ಅವರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸಲು ಹೇಳುತ್ತೇನೆ. ಅಲ್ಲಿನ ಬಗ್ಗೆ ಸರಿಯಾದ ಮಾಹಿತಿ ನನಗೆ ಗೊತ್ತಿಲ್ಲ. ಏನಾಗಿದೆ ಎಂದು ತಿಳಿಯದೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳುವುದು ತಪ್ಪಾಗುತ್ತದೆ. ಪ್ರೊಸಿಜರ್ ಪ್ರಕಾರ ಅವರ ಮೇಲೆ ಕ್ರಮ ಕೈಗೊಳ್ತೇವೆ' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಪ್ಲೈಓವರ್ ಕಾಮಗಾರಿ ವೇಳೆ ತಲೆಗೆ ಕಬ್ಬಿಣದ ರಾಡ್ ಬಿದ್ದು ASIಗೆ ಗಂಭೀರ ಗಾಯ