ಬೆಂಗಳೂರು :'ಸಂಸದ ಡಿ.ಕೆ ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿಯಂತೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು' ಎಂಬ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈಶ್ವರಪ್ಪ ವಿರುದ್ಧ ಆರ್‌ಆರ್ ನಗರ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಹಾಗೂ ಸಂಜಯ್ ಎಂಬುವವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಫೆ. 08 ರಂದು ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಈಶ್ವರಪ್ಪ, ''ಸಂಸದ ಡಿಕೆ ಸುರೇಶ್, ಶಾಸಕ ವಿನಯ್ ಕುಲಕರ್ಣಿ ಇಬ್ಬರು ದೇಶದ್ರೋಹಿಗಳು. ಇಬ್ಬರನ್ನು ಪಕ್ಷದಿಂದ ಕಿತ್ತು ಬಿಸಾಕಬೇಕು. ಈ ವೇದಿಕೆಯಿಂದಲೇ ಇವರ ಹಾಗೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವೆ. ಈ ರೀತಿಯ ದೇಶ ವಿಭಜನೆ ಎಂಬುದು ಜವಾಹರಲಾಲ್ ನೆಹರು ಕಾಲದಿಂದ ಬಂದಿದೆ'' ಎಂದು ಖಾರವಾಗಿ ವಾಗ್ದಾಳಿ ನಡೆಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಪೊಲೀಸರು ನೋಟಿಸ್ ಸಹ ಜಾರಿ ಮಾಡಿದ್ದಾರೆ. ಅಲ್ಲದೇ ಶಿವಮೊಗ್ಗದ ಮಲ್ಲೇಶ್ವರ ಬಡಾವಣೆಯಲ್ಲಿರುವ ಕೆ.ಎಸ್ ಈಶ್ವರಪ್ಪ ಅವರ ನಿವಾಸಕ್ಕೂ ಪೊಲೀಸರು ಭೇಟಿ ನೀಡಿದ್ದರು.
ಈ ಘಟನೆ ಬೆನ್ನಲ್ಲೇ ಈಶ್ವರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿತ್ತು. ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ''ಮಹಾತ್ಮ ಗಾಂಧಿಯವರಿಗೆ ಗುಂಡಿಕ್ಕಿದ ಗೋಡ್ಸೆ ಸಂತತಿಯವರಾದ ಕರ್ನಾಟಕ ಬಿಜೆಪಿ ನಾಯಕರ ಭಯೋತ್ಪಾದಕ ಮನಸ್ಥಿತಿ ಅನಾವರಣವಾಗಿದೆ. ಸಂಸದರಾದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಮೂಲಕ ಬಿಜೆಪಿಯ ಕೆಎಸ್ ಈಶ್ವರಪ್ಪ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಈ ‘ಗುಂಡು’ ಹಾಕುವ ವ್ಯಕ್ತಿಯ ಮೇಲೆ ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡುತ್ತೇವೆ'' ಎಂದಿತ್ತು. ಈ ಬಗ್ಗೆ ಹೇಳಿಕೆ ನೀಡಿದ್ದ ಗೃಹ ಸಚಿವರು ಕಾನೂನಿನ ಪ್ರಕಾರ ಕ್ರಮ ಆಗುತ್ತದೆ ಎಂದಿದ್ದರು.
ಇದನ್ನೂ ಓದಿ :ನೈತಿಕ ಪೊಲೀಸ್ ಗಿರಿ ಪ್ರಕರಣಗಳಿಗೆ ಅವಕಾಶ ಕೊಡಬಾರದು: ಸಚಿವ ದಿನೇಶ್ ಗುಂಡೂರಾವ್