ಕರ್ನಾಟಕ

karnataka

ETV Bharat / state

ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ - ORGANIC AND MILLETS FAIR

ಕೇಂದ್ರ ಸರ್ಕಾರ ರೈತರ ಹಲವು ದಿನದ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.

CM Siddaramaiah says from next year will arrange market facility for millets in APMC
ಸಿದ್ದರಾಮಯ್ಯ (ಈಟಿವಿ ಭಾರತ್​​)

By ETV Bharat Karnataka Team

Published : Jan 23, 2025, 4:42 PM IST

ಬೆಂಗಳೂರು: ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಒಂದು ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಮಂಡ್ಯ, ಹಾಸನ, ಮೈಸೂರು ಚಾಮರಾಜನಗರ ಭಾಗದ ರೈತರಿಗೆ ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅರಮನೆ ಆವರಣದಲ್ಲಿ ಇಂದು ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದೇ ವೇಳೆ, ಕೇಂದ್ರ ಸರ್ಕಾರ ರೈತರ ಹಲವು ದಿನದ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ (ಈಟಿವಿ ಭಾರತ್​)

ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ: ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರ ಕೃಷಿ, ಮಾರುಕಟ್ಟೆ ಹಾಗೂ ಇತರ ಸೌಲಭ್ಯಗಳನ್ನು ನೀಡುವ ಮೂಲಕ ಸಿರಿಧಾನ್ಯ ಕೃಷಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಬದ್ಧವಾಗಿದೆ. ವಿರಳ ಮಳೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸಾವಯವ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ ಎಂದರು.

ಕೃಷಿ ಕುಟುಂಬಕ್ಕೆ ಸೇರಿದ ತಮ್ಮ ಕುಟುಂಬದವರೂ ಕೂಡ ಸಿರಿಧಾನ್ಯಗಳ ಕೃಷಿ ಮಾಡುತ್ತಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ರಾಗಿ ತಿಂದವನು ನಿರೋಗಿ ಎಂಬಂತೆ, ಸಿರಿಧಾನ್ಯಗಳ ಸೇವೆನೆ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಿಳಿಸಿದರು.

ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ (ಈಟಿವಿ ಭಾರತ್​)

ಸಿರಿಧಾನ್ಯ ಉತ್ಪಾದನೆಯಲ್ಲಿ ಕರ್ನಾಟಕ 3ನೇ ಸ್ಥಾನ: ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದೆ. ಸಾವಯವ ಕೃಷಿ ವಿಸ್ತೀರ್ಣದಲ್ಲಿ ಭಾರತವು ವಿಶ್ವದಲ್ಲಿ 2ನೇ ಸ್ಥಾನ ಹಾಗೂ ಒಟ್ಟು ಸಾವಯವ ಉತ್ಪಾದಕರಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟಾರೆ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.38.50ರಷ್ಟಿದ್ದು, ವಿಶ್ವದ ಸಿರಿಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ನಮ್ಮ ರಾಜ್ಯವು ಸಿರಿಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿರುತ್ತದೆ

ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ (ಈಟಿವಿ ಭಾರತ್​)

ಸಾವಯವ ಕೃಷಿ ನೀತಿ: ಭಾರತ ಸಾವಯವ ಆಹಾರ ರಫ್ತಿನ ಆದಾಯ ಸುಮಾರು 4008 ಕೋಟಿ ರೂ.ಗಳಷ್ಟಿದೆ. ಸಾವಯವ ಮತ್ತು ಸಿರಿಧಾನ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಸರಬರಾಜು ಸರಪಳಿಯನ್ನು ಕಲ್ಪಿಸುವ ಉದ್ದೇಶದೊಂದಿಗೆ 2017ರಲ್ಲೇ ನಮ್ಮ ಸರ್ಕಾರ ಪರಿಷ್ಕೃತ ಸಾವಯವ ಕೃಷಿ ನೀತಿ ಹೊರತಂದಿದೆ. ರಾಜ್ಯದ ರೈತರಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ಸಾವಯವ ಭಾಗ್ಯ ಯೋಜನೆಯನ್ನು 2013 ನೇ ಸಾಲಿನಲ್ಲಿ ಹೊರತಂದು ಹೋಬಳಿಮಟ್ಟದಲ್ಲಿ ಮಾದರಿ ಸಾವಯವ ಗ್ರಾಮಗಳನ್ನು ಸ್ಥಾಪಿಸಿ ರೈತರನ್ನು ಒಗ್ಗೂಡಿಸಿ ಉತ್ತೇಜಿಸಲಾಗಿದೆ.

ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ (ಈಟಿವಿ ಭಾರತ್​)

ಸಂಶೋಧನಾ ಕೇಂದ್ರ: ರಾಜ್ಯದ ಸಿರಿಧಾನ್ಯ ಕ್ಷೇತ್ರವನ್ನು ವಿಸ್ತರಿಸಲು 'ರೈತ ಸಿರಿ' ಯೋಜನೆಯಡಿ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ. 10,000ರೂ ಗಳಂತೆ ಗರಿಷ್ಠ 2 ಹೆಕ್ಟೇರ್ ಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ದೊರಕಿಸಿಕೊಡಲು ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ 15 ಪ್ರಾಂತೀಯ ಸಾವಯವ ಒಕ್ಕೂಟಗಳನ್ನು ರಚಿಸಲಾಗಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಿರಿಧಾನ್ಯಗಳ ಉತ್ತೇಜನದಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರಯತ್ನಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರಶಂಸನಾ ಪತ್ರವನ್ನು ಕೃಷಿ ಇಲಾಖೆಗೆ ನೀಡಿದೆ ಎಂದರು.

ಇದನ್ನೂ ಓದಿ:ರಾಜ್ಯ ಕಂಡ ಗಂಭೀರ ಅಪಘಾತ ಪ್ರಕರಣಗಳು: ಸಾವು - ನೋವುಗಳೆಷ್ಟು? ಇಲ್ಲಿದೆ ಅಂಕಿ ಅಂಶ

ಇದನ್ನೂ ಓದಿ:ಕೊಡುಗು: ನಡುರಸ್ತೆಯಲ್ಲಿ ರಾಜಾರೋಷವಾಗಿ ಕಾಡಾನೆ ಸಂಚಾರ

ABOUT THE AUTHOR

...view details